ಸಿನಿಮಾ ಸುದ್ದಿ

ಕಿಚ್ಚ ಸುದೀಪ್-ಎಂ ಎನ್ ಕುಮಾರ್ ನಡುವೆ ವಿವಾದ: ಹಿರಿಯ ನಟ ರವಿಚಂದ್ರನ್ ನಿವಾಸದಲ್ಲಿ ಮಾತುಕತೆ

Sumana Upadhyaya

ಸ್ಯಾಂಡಲ್ ವುಡ್ ನಾಯಕ ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (M N Kumar) ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿ ನಂತರ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅಂಗಳಕ್ಕೆ ತಲುಪಿ ಮಾತುಕತೆ ಮೂಲಕ ಬಗೆಹರಿಸಲು ಇಬ್ಬರೂ ಪ್ರಯತ್ನಿಸಿದರು.

ಅದರಂತೆ ನಿನ್ನೆ ಅಪರಾಹ್ನ ನಟ ರವಿಚಂದ್ರನ್ ಮನೆಯಲ್ಲಿ ಸಂಧಾನ ಸಭೆ ನಡೆಯಿತು. ಅಪರಾಹ್ನ ಆರಂಭವಾದ ಮಾತುಕತೆ ತಡರಾತ್ರಿಯವರೆಗೆ ಮುಂದುವರೆದರೂ ಏಕಮತದ ನಿರ್ಣಯಕ್ಕೆ ಬರಲಾಗದೆ ಇಂದು ಅಥವಾ ನಾಳೆ ಕೂಡ ಮಾತುಕತೆ ಮುಂದುವರಿಯುವ ಸಾಧ್ಯತೆಯಿದೆ. ಇಂದು ಬಹುತೇಕ ಸಂಧಾನ ಮಾತುಕತೆ ಯಶಸ್ವಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ನಿನ್ನೆ ಸತತ ಏಳು ಗಂಟೆಗಳ ಕಾಲ ನಡೆದ ಸಂಧಾನ ಸಭೆಯಲ್ಲಿ ಸುದೀಪ್, ಎಂಎನ್ ಕುಮಾರ್ ಅವರುಗಳು ತಮ್ಮ-ತಮ್ಮ ಪರವಾದ ವಾದಗಳನ್ನು ಮಂಡಿಸಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ್ದ ಪ್ರಮುಖರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸುದೀಪ್ ಹಾಗೂ ಎಂಎನ್ ಕುಮಾರ್ ಅವರೂ ಪರಸ್ಪರ ಮಾತುಕತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದೆಯಾದರೂ ಕೆಲವು ನಿರ್ಣಯಗಳನ್ನು ಸಭೆಯ ಮುಖಂಡರು ಮಾಡಬೇಕಾಗಿದೆ. ಹಾಗಾಗಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.

ನಾಳೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಂದು ಅಂತಿಮ ತೀರ್ಮಾನವನ್ನು ಸುದೀಪ್ ಹಾಗೂ ಎಂಎನ್ ಕುಮಾರ್ ಅವರ ಮುಂದಿಡಲಾಗುತ್ತದೆ ಎನ್ನಲಾಗಿದೆ. ಸಭೆಯ ಪ್ರಮುಖರ ತೀರ್ಪಿನ ಅನ್ವಯ ಇಬ್ಬರೂ ಸಹ ನಡೆದುಕೊಳ್ಳಬೇಕಾದ ಷರತ್ತು ಸಹ ವಿಧಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.

ಸುದೀಪ್ ಅವರು ಸಿನಿಮಾ ಮಾಡಿಕೊಡುತ್ತೇನೆ ಎಂದು ತಮ್ಮಿಂದ ಅಡ್ವಾನ್ಸ್ ಹಣ ಪಡೆದು ಅದನ್ನು ಮರಳಿಸಿಲ್ಲ ಅಲ್ಲದೆ ಸಿನಿಮಾಕ್ಕೆ ಡೇಟ್ಸ್ ಸಹ ನೀಡುತ್ತಿಲ್ಲ ಎಂದು ಕುಮಾರ್ ಆರೋಪ ಮಾಡಿದ್ದರು. ಇದು ಮಾತ್ರವೇ ಅಲ್ಲದೆ ನಾನು ನಿರ್ಮಿಸಬೇಕಿದ್ದ ಸಿನಿಮಾ ಸಹ ತಪ್ಪಿಸಿದ್ದಾರೆ ಎಂದು ಸಹ ಕುಮಾರ್ ಆರೋಪ ಮಾಡಿದ್ದರು. ಆರೋಪ ಮಾಡಿದ ಬೆನ್ನಲ್ಲೆ ನಿರ್ಮಾಪಕ ರೆಹಮಾನ್ ಸಹ ಸುದೀಪ್ ವಿರುದ್ಧ ಆರೋಪ ಮಾಡಿದರು.

ಇದಕ್ಕೆ ನ್ಯಾಯಾಲಯ ಮೊರೆ ಹೋದ ಸುದೀಪ್, ಆರೋಪ ಮಾಡಿದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ನೊಟೀಸ್ ಬಂದ ಬಳಿಕ ಕುಮಾರ್ ಅವರು ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಫಿಲಂ ಚೇಂಬರ್ ಎದುರು ಧರಣಿ ಕೂತರು. ಕೊನೆಗೆ ರವಿಚಂದ್ರನ್ ಅವರು ತಾವು ಸಂಧಾನ ಸಭೆ ನಡೆಸುವುದಾಗಿ ಒಪ್ಪಿಕೊಂಡ ಬಳಿಕ ಧರಣಿ ನಿಲ್ಲಿಸಿ ರವಿಚಂದ್ರನ್ ಅನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮೊದಲ ಹಂತದ ಸಭೆ ಮುಗಿದಿದ್ದು ಮುಂದಿನ ಸಭೆ ನಾಳೆ ಅಥವಾ ನಾಡಿದ್ದು ನಡೆಯಲಿದೆ.

SCROLL FOR NEXT