ಸಿನಿಮಾ ಸುದ್ದಿ

ಬಾಡೂಟದ ಹಿಂದೆ ಮತ ಸೆಳೆಯುವ ಲೆಕ್ಕಾಚಾರ; ಬೀಗರ ಊಟದಲ್ಲಿ ಷಡ್ಯಂತ್ರ; ಟೀಕೆಗಳಿಗೆ ಅಭಿಷೇಕ್ ಹೇಳಿದ್ದೇನು?

Shilpa D

ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ರಾಜಕೀಯ ಉದ್ದೇಶದಿಂದ ಈ ಔತಣ ಕೂಟ ಆಯೋಜಿಸಿದ್ದಾರೆ ಎಂಬ ಟೀಕೆ ಅಲ್ಲಲ್ಲಿ ಕೇಳಿ ಬರುತ್ತಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಅಭಿಷೇಕ್ ಅಂಬರೀಶ್ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಮಂಡ್ಯದಲ್ಲಿ ನಡೆದ ಅಭಿಷೇಕ್ ಅಂಬರೀಶ್  ಮತ್ತು ಅವಿವಾ  ಮದುವೆಯ ಬೀಗರೂಟದ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಬೀಗರೂಟ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬೀಗರೂಟವನ್ನು ರಾಜಕೀಯಕ್ಕೆ ತರಬೇಡಿ ಎಂದು ಮನವಿ ಮಾಡಿದ್ದಾರೆ.

ಬೀಗರೂಟ ನಡೆಯುವ ಸಂದರ್ಭದಲ್ಲಿ ಕೆಲ ಜನರು ಅಡುಗೆ ಕೋಣೆಗೆ ನುಗ್ಗಿ ದಾಂಧಲೆ ನಡೆಸಿ ಆಹಾರವನ್ನು ಚೆಲ್ಲಿದ ಬಗ್ಗೆ ಮಾತನಾಡಿದ ಅಭಿಷೇಕ್, ಕೆಲವರ ಪ್ರಚೋದನೆಯಿಂದ ಹೀಗಾಗಿದೆ ಎಂದು ಅನ್ನಿಸುತ್ತಿದೆ. ಈ ಕಾರ್ಯಕ್ರಮದಿಂದ ನಾವು ರಾಜಕೀಯ ಲಾಭ ಪಡೆಯುತ್ತೇವೆ ಎಂಬ ದುರಾಲೋಚನೆಯಿಂದ ಕೆಲವರು ಹೀಗೆ ಮಾಡಿರುವ ಸಾಧ್ಯತೆ ಇದೆ. ಆದರೆ ಈ ಕಾರ್ಯಕ್ರಮದ ಹಿಂದೆ ಯಾವುದೇ ರಾಜಕೀಯ ಯೋಚನೆಗಳು ಇಲ್ಲ ಎಂದು ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ ಎಂದರು.

ನಾವು ರಾಜಕೀಯ ಉದ್ದೇಶದಿಂದ ಈ ಕಾರ್ಯಕ್ರಮ ಮಾಡುವುದಿದ್ದರೆ ವಿಧಾನಸಭೆ ಚುನಾವಣೆಗೆ ಮುಂಚೆ ಮಾಡಬೇಕಿತ್ತು ಅಥವಾ ನಮ್ಮ ಅಮ್ಮನಿಗೆ ಸಹಾಯವಾಗಲೆಂದು ಲೋಕಸಭೆ ಚುನಾವಣೆ ಸಮೀಪ ಬಂದಾಗ ಮಾಡಬಹುದಿತ್ತು ಆದರೆ ನಾವು ಹಾಗೆ ಮಾಡಲಿಲ್ಲ. ಎಷ್ಟೋ ಜನ ಮುಖಂಡರು ಬಂದು ನಮಗೆ ಸಲಹೆ ಕೊಟ್ಟರು. ಈ ಸಮಯದಲ್ಲಿ ಈ ಕಾರ್ಯಕ್ರಮ ಬೇಡ ಇನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಿಕೊಂಡರೆ ಚುನಾವಣೆಗೆ ಸಹಾಯ ಆಗುತ್ತದೆ ಎಂದರು. ರಾಜಕೀಯ ಕೋನದಿಂದ ಅದು ಸರಿಯಾಗಿತ್ತು ಆದರೆ ನಾವು ಒಪ್ಪಲಿಲ್ಲ. ಇದು ನಮ್ಮ ಮದುವೆ ಸಂಭ್ರಮ ಇದಕ್ಕೆ ರಾಜಕೀಯ ಬೆರೆಸುವುದು ಬೇಡವೆಂಬುದು ನಮ್ಮ ನಿಲವಾಗಿತ್ತು ಎಂದಿದ್ದಾರೆ ಅಭಿಷೇಕ್.

ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ನಿಮ್ಮನ್ನು ನೋಡಲು ಬಂದೆ ಅನ್ನೋರು ಇದ್ರು. ಊಟ ಮಿಸ್ ಆಗಿದ್ದಕ್ಕೆ ಬೇಜಾರಾಗಿದೆ. ರಾಜಕೀಯ ವಿರೋಧಿಗಳು ಇದನ್ನು ಬಳಸಿಕೊಂಡರೆ ಅವರಿಗೂ ಒಳ್ಳೆಯದು ಆಗಲಿ. ಊಟ ಶಾರ್ಟೇಜ್ ಅನ್ನೋದು ಸುಳ್ಳು. ಊಟ ಬಿದ್ದಿದೆ. ನಮ್ಮ ತಂದೆಯ ಆಸೆಯಂತೆ ಮದುವೆಯಾಗಿದ್ದೇನೆ. ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆಯಾಗುತ್ತಿದ್ದೆ ಎಂದಿದ್ದಾರೆ.

ಅಂಬರೀಶ್ ಅವರ ಮಗನ ಮದುವೆ ಇದು. ನಮ್ಮ ಕುಟುಂಬವನ್ನು ಸಾಕಿರುವ ಜನ ಇವರು. ಹಾಗಾಗಿ ಮೊದಲೇ ನಿಶ್ಚಯಿಸಿಕೊಂಡಿದ್ದೆವು. ಮಂಡ್ಯದಲ್ಲಿಯೇ ನಾವು ಬೀಗರೂಟ ಹಾಕಿಸಬೇಕೆಂದು. ಕುಟುಂಬದಲ್ಲಿ ಮದುವೆ ಆದರೆ ಹೇಗೆ ಬಂಧುಗಳನ್ನು ಕರೆದು ಊಟ ಹಾಕಿಸುತ್ತಾರೋ ಹಾಗೆಯೇ ನಾವು ಊಟ ಹಾಕಿಸಬೇಕು ಎಂದುಕೊಂಡಿದ್ದೆವು ಹಾಗೆಯೇ ಮಾಡಿದೆವು ಎಂದಿದ್ದಾರೆ.

SCROLL FOR NEXT