ವಾಷಿಂಗ್ಟನ್ ಡಿಸಿ: ಅಪ್ಪಟ ಕನ್ನಡ ಸೊಗಡಿನ ‘ಕಾಂತಾರ’(Kantara) ಚಿತ್ರವನ್ನು ನಿರ್ದೇಶಿಸಿ ದೇಶ ವಿದೇಶದಲ್ಲಿ ಜನಪ್ರಿಯತೆ ಗಳಿಸಿದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ರಿಷಬ್ ಶೆಟ್ಟಿ(Rishab Shetty) ಅವರಿಗೆ ಇತ್ತೀಚೆಗೆ ಅಮೆರಿಕ ಕನ್ನಡಿಗರು ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪ್ರದಾನ ಮಾಡಿದ್ದರು.
ರಿಷಬ್ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ ಜೊತೆಗೂಡಿ ವಾಷಿಂಗ್ಟನ್ ನಗರದ ಪ್ಯಾರಾಮೌಂಟ್ ಥಿಯೇಟರ್ ಗೆ ತೆರಳಿ ಪ್ರಶಸ್ತಿ ಸ್ವೀಕರಿಸಿದರು.
ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು, ಸಿಯಾಟಲ್ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ರಿಷಬ್ ಶೆಟ್ಟಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ.
ರಿಷಬ್ ಶೆಟ್ಟಿ ಅವರಿಗೆ ಎಲ್ಲಿ ಹೋದರಲ್ಲಿ ಅಭಿಮಾನಿಗಳಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಜನತೆ, ವಯಸ್ಕರು, ಮಹಿಳೆಯರು, ಇಳಿ ವಯಸ್ಸಿನವರು ಅವರನ್ನು ಇಷ್ಟಪಡುತ್ತಾರೆ.
ಪಂಚೆಯಲ್ಲಿ ಮಿಂಚಿದ ಕುಂದಾಪ್ರ ಶೆಟ್ರು: ಪ್ಯಾಂಟ್ ಬದಲಿಗೆ ಪಂಚೆ ಸಾಮಾನ್ಯವಾಗಿ ಕರಾವಳಿ ಕನ್ನಡಿಗ ಪುರುಷರ ಅಚ್ಚುಮೆಚ್ಚಿನ ಉಡುಪು. ಸಮಾರಂಭಗಳಲ್ಲಿ ಸಾಮಾನ್ಯವಾಗಿ ಪಂಚೆಗಳನ್ನೇ ಧರಿಸುತ್ತಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಅವರು ಸಿನಿಮಾ ಸಮಾರಂಭಗಳಿಗೆ ಧರಿಸುವ ಪಂಚೆ ಬಹುತೇಕರ ಫೇವರಿಟ್ ಆಗಿದೆ.
ರಿಷಬ್ ಶೆಟ್ಟಿಯವರು ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಪಂಚೆ ಧರಿಸಿ ಮಿಂಚುವುದುಂಟು. ವಿಶ್ವ ಶ್ರೇಷ್ಟ ಕನ್ನಡಿಗ ಪ್ರಶಸ್ತಿ ಸ್ವೀಕರಿಸಲು ಕೂಡ ಪಂಚೆ ಧರಿಸಿಕೊಂಡೇ ಹೋಗಿದ್ದಾರೆ.