ತಮಿಳು ಚಿತ್ರರಂಗದ ಜನಪ್ರಿಯ ನಟ-ಸಂಗೀತ ಸಂಯೋಜಕ ವಿಜಯ್ ಆಂಟನಿ ಅವರು ಕೆಲವು ದಿನಗಳ ಹಿಂದೆ ತಮ್ಮ ಕಿರಿಯ ಮಗಳು ಮೀರಾಳನ್ನು ಕಳೆದುಕೊಂಡ ನಂತರ ಆಘಾತ ಮತ್ತು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಶೈಕ್ಷಣಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕಿ ಆತ್ಮಹತ್ಯೆಯ ಮೂಲಕ ತನ್ನ ಜೀವನವನ್ನು ದುರಂತವಾಗಿ ಕೊನೆಗೊಳಿಸಿದ್ದಾಳೆ. ಅನಿರೀಕ್ಷಿತ ದುರಂತದ ನಂತರ ಮೊದಲ ಬಾರಿಗೆ, ವಿಜಯ್ ತನ್ನ ಮಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಾಕಿದ್ದಾರೆ.
ವಿಜಯ್ ಕಳೆದ ರಾತ್ರಿ ಟ್ವಿಟ್ಟರ್ ಮೂಲಕ ಭಾವುಕ ನುಡಿಗಳನ್ನು ಬರೆದಿದ್ದು, ಮಗಳನ್ನು "ಪ್ರೀತಿಯ ಮತ್ತು ಧೈರ್ಯಶಾಲಿ" ಎಂದು ಬಣ್ಣಿಸಿದ್ದಾರೆ. ಉತ್ತಮ ಕೆಲಸಗಳಲ್ಲಿ ತೊಡಗಿಸಿಕೊಂಡು ಜೀವನವನ್ನು, ಜಗತ್ತನ್ನು ಉತ್ತಮವಾಗಿಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಜಾತಿ, ಧರ್ಮದ ತಾರತಮ್ಯ, ಹಣ, ಅಸೂಯೆ, ನೋವು ಮತ್ತು ದುರುದ್ದೇಶಗಳಿಲ್ಲದೆ ಉತ್ತಮ ಸ್ಥಳದಲ್ಲಿ ತನ್ನ ಮಗಳಿದ್ದಾಳೆ ಎಂದು ಸಹ ಬರೆದುಕೊಂಡಿದ್ದಾರೆ.
ಮಗಳು ನನ್ನೊಂದಿಗೆ ಮಾತನಾಡುತ್ತಿದ್ದಾಳೆ. ನಾನು ಕೂಡ ಅವಳ ಜೊತೆಗೆ ಸತ್ತೆ. ನಾನು ಅವಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ಇಂದಿನಿಂದ, ನಾನು ಕೈಗೊಳ್ಳುವ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಅವಳು ಪ್ರಾರಂಭಿಸುತ್ತಾಳೆ ಎಂದು ನೋವಿನಿಂದ ಬರೆದುಕೊಂಡಿದ್ದು, ಇದನ್ನು ಓದಿದ ಪ್ರತಿಯೊಬ್ಬರೂ ಕಣ್ಣೀರು ಹಾಕುವಂತೆ ಮಾಡಿದ್ದಾರೆ.