ಹೈದರಾಬಾದ್: ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಪುಷ್ಪ 2 ಚಿತ್ರದ ಓಟ ಮುಂದುವರೆದಿದ್ದು, ಬಿಡುಗಡೆಯಾದ 4 ದಿನಕ್ಕೆ ಚಿತ್ರದ ಗಳಿಕೆ 829 ಕೋಟಿ ರೂಗೆ ಏರಿಕೆಯಾಗಿದೆ.
ಆ ಮೂಲಕ ಬಿಡುಗಡೆಯಾದ ಮೊದಲ ವಾರಾಂತ್ಯದ ಹೊತ್ತಿಗೆ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಮೊದಲ ಚಿತ್ರ ಎಂಬ ಕೀರ್ತಿಗೆ ಪುಷ್ಪ 2 ಪಾತ್ರವಾಗಿದೆ. ಮೂಲಗಳ ಪ್ರಕಾರ ಪುಷ್ಪ 2 ಚಿತ್ರ ವಿಶ್ವಾದ್ಯಂತ 92.5 ಮಿಲಿಯನ್ ಡಾಲರ್ ಗಳಿಸಿದ್ದು, ಅಂತೆಯೇ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರಗಳ ಸಾಲಿಗೆ ಸೇರಿದೆ. ಈ ದಾಖಲೆ ಮಾಡಿದ ಭಾರತದ 9ನೇ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.
ಬ್ರಿಟನ್ ನಲ್ಲಿ 1,118,264, ಪೌಂಡ್ ಗಳಿಸಿದ್ದು, UAEಯಲ್ಲಿ 37,00,000 ಡಾಲರ್, ಆಸ್ಟ್ರೇಲಿಯಾದಲ್ಲಿ 2,316,337 ಡಾಲರ್, ನ್ಯೂಜಿಲೆಂಡ್ ಮತ್ತು ಫಿಜಿಯಲ್ಲಿ 411,580 ಡಾಲರ್, ಸಿಂಗಾಪುರದಲ್ಲಿ 384,000 ಡಾಲರ್, ಮಲೇಷ್ಯಾದಲ್ಲಿ 1,542,000 ಡಾಲರ್ ಗಳಿಸಿದೆ. ಅಂತೆಯೇ ಜರ್ಮನಿಯಲ್ಲಿ ಪುಷ್ಪ2 ಚಿತ್ರ 200,470 ಯೂರೋ ಗಳಿಸಿದ್ದು, ಇತರೆ ದೇಶಗಳಲ್ಲಿ ಒಟ್ಟಾರೆ 750,000 ಡಾಲರ್ ಗಳಿಕೆ ಕಂಡಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ದೇಶೀಯ ಮಾರುಕಟ್ಟೆಯಲ್ಲೂ ಪುಷ್ಪ2 ದಾಖಲೆ ಗಳಿಕೆ
ಇನ್ನು ಭಾರತೀಯ ಬಾಕ್ಸ್ ಆಫೀಸ್ ನಲ್ಲೂ ಪುಷ್ಪ2 ದಾಖಲೆಯ ಗಳಿಕೆ ಕಂಡಿದ್ದು, ಮೊದಲ ವಾರಾಂತ್ಯದ ಹೊತ್ತಿಗೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಲಾ 100 ಕೋಟಿ ಗಳಿಸಿದ ಮೊದಲ ಭಾರತೀಯ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.
ಕಡಿಮೆ ಅವಧಿಯಲ್ಲಿ 500 ಕೋಟಿ ರೂ ಗಳಿಸಿದ ಮೊದಲ ಚಿತ್ರ
ಇದೇ ವೇಳೆ ಪುಷ್ಪ 2 ಚಿತ್ರದ ಬಾಕ್ಸ್ ಆಫೀಸ್ ಗಳಿಕೆ 3 ದಿನಕ್ಕೆ 600 ಕೋಟಿ ರೂ ದಾಟಿತ್ತು. ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ 500 ಕೋಟಿ ರೂ ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಗೆ ಪಾತ್ರವಾಗಿತ್ತು. ಇದಲ್ಲದೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಓಪನಿಂಗ್ ಗಳಿಸಿದ ಚಿತ್ರಗಳ ದಾಖಲೆಯನ್ನು ಪುಷ್ಪ2 ಮುರಿದಿದ್ದು, ಇದಕ್ಕೂ ಮೊದಲು SS ರಾಜಮೌಳಿಯವರ RRR (Rs 223.5 ಕೋಟಿ), ಬಾಹುಬಲಿ 2 (Rs 217 ಕೋಟಿ) ಮತ್ತು ಕಲ್ಕಿ 2898 AD (Rs 175 ಕೋಟಿ) ಗೆ ಸೇರಿತ್ತು.