ಹೈದರಾಬಾದ್: ನಾನು ಆರಾಮಗಿದ್ದೇನೆ. ಬಗ್ಗೆ ಚಿಂತಿಸುವುದು ಬೇಡ. ನಾನು ಕಾನೂನನ್ನು ಗೌರವಿಸುತ್ತೇನೆ ಹಾಗೂ ತನಿಖೆಗೆ ಸಹಕರಿಸುತ್ತೇನೆ’ ಎಂದು ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಶನಿವಾರ ಹೇಳಿದ್ದಾರೆ.
ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಎ11 ಆರೋಪಿ ಆಗಿರುವ ಅಲ್ಲು ಅರ್ಜುನ್ ಅವರು, ನಿನ್ನೆಯಷ್ಟೇ ಬಂಧನಕ್ಕೊಳಗಾಗಿದ್ದರು. ಇದೀಗ ಮಧ್ಯಂತರ ಜಾಮೀನನ ಮೇಲೆ ಇಂದು ಬೆಳಿಗ್ಗೆ ಬಿಡುಗಡೆಗೊಂಡಿದ್ದಾರೆ.
ಬಿಡುಗಡೆಗೊಂಡ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ನಟ, ಪ್ರೀತಿ ಹಾಗೂ ಬಂಬಲ ತೋರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನ್ನ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಆರಾಮಗಿದ್ದೇನೆ. ಆ ಬಗ್ಗೆ ಚಿಂತಿಸುವುದು ಬೇಡ. ನಾನು ಕಾನೂನನ್ನು ಗೌರವಿಸುತ್ತೇನೆ ಹಾಗೂ ತನಿಖೆಗೆ ಸಹಕರಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮೃತಪಟ್ಟ ರೇವತಿ ಕುಟುಂಬದವರ ಬಗ್ಗೆ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಸಿನಿಮಾ ನೋಡಲು ಹೋದಾಗ ಈ ಘಟನೆ ನಡೆಯಿತು. ಅದು ಅಚಾನಕ್ಕಾಗಿ ಆಗಿದ್ದು. ಘಟನೆ ಬಗ್ಗೆ ನೋವಿದೆ. ಹಿಂದೆಂದೂ ಇಂತಹ ಘಟನೆಗಳು ನಡೆದಿರಲಿಲ್ಲ. ಆ ರೀತಿ ಮಾಡಬೇಕು ಎಂಬ ಯಾವುದೇ ಉದ್ದೇಶ ಇರಲಿಲ್ಲ. ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ.
ಅದು ನನ್ನ ವೈಯಕ್ತಿಕ ನಿಯಂತ್ರಣದಲ್ಲಿ ಇರಲಿಲ್ಲ. ನಾನು ಕಳೆದ 20 ವರ್ಷಗಳಿಂದ ಅಲ್ಲಿಗೆ ಸಿನಿಮಾ ನೋಡಲು ಹೋಗುತ್ತಿದ್ದೇನೆ. ನನ್ನ ಸಿನಿಮಾ ಅಷ್ಟೇ ಅಲ್ಲ, ನನ್ನ ಅಂಕಲ್ ಸಿನಿಮಾಗಳನ್ನೂ ಅಲ್ಲಿ ನೋಡಿದ್ದೇನೆ. 30ಕ್ಕೂ ಹೆಚ್ಚು ಬಾರಿ ಆ ಥಿಯೇಟರ್ಗೆ ಭೇಟಿ ಕೊಟ್ಟಿದ್ದೇನೆ. ಯಾವಾಗಲೂ ಈ ರೀತಿ ಆಗಿರಲಿಲ್ಲ. ಸಾವಿನ ನಷ್ಟ ತುಂಬಲು ಸಾಧ್ಯವಿಲ್ಲ. ಆದರೆ, ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆಂದು ತಿಳಿಸಿದರು.