
ಹೈದರಾಬಾದ್: ಸಂಧ್ಯಾ ಥಿಯೇಟರ್ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಟಾಲಿವುಡ ನಟ ಅಲ್ಲು ಅರ್ಜುನ್ ಅವರು ಶನಿವಾರ ಬಿಡುಗಡೆಯಾಗಿದ್ದಾರೆ.
ಪೊಲೀಸ್ ಬಿಗಿ ಭದ್ರತೆಯೊಂದಿಗೆ ಚಂಚಲಗೂಡ ಸೆಂಟ್ರಲ್ ಜೈಲಿನ ಹಿಂಬದಿ ಗೇಟ್ನಿಂದ ನಟ ಅಲ್ಲು ಅರ್ಜುನ್ ಅವರನ್ನು ರಿಲೀಸ್ ಮಾಡಲಾಗಿದೆ.
4 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿನ್ನೆಯೇ ಬೇಲ್ ಸಿಕ್ಕರೂ ಕೂಡ ಅಲ್ಲು ಅರ್ಜುನ್ ಜೈಲಿನಲ್ಲಿ ಒಂದು ರಾತ್ರಿ ಕಳೆಯುವಂತಾಗಿತ್ತು.
ಕೆಳ ಹಂತದ ಕೋರ್ಟ್ ಅವರಿಗೆ 14 ದಿನ ನ್ಯಾಯಂಗ ಬಂಧನ ವಿಧಿಸಿದರೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಕೋರ್ಟ್ ಪ್ರತಿ ಜೈಲು ಸೇರದ ಹಿನ್ನೆಲೆಯಲ್ಲಿ ಅವರ ಬಿಡುಗಡೆ ತಡವಾಗಿತ್ತು.
ಸಂಧ್ಯಾ ಥಿಯೇಟರ್ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಆರೋಪಿ ಸ್ಥಾನದಲ್ಲಿ ಇರಿಸಿದ್ದಾರೆ. ‘ಪುಷ್ಪ 2’ ಚಿತ್ರದ ಪ್ರೀಮೀಯರ್ ಪ್ರದರ್ಶನದ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್‌ಗೆ ಹೋಗಿದ್ದರು. ಅಲ್ಲು ಅರ್ಜುನ್ ಆಗಮನದಿಂದ ಅಭಿಮಾನಿಗಳು ಒಮ್ಮೆಲೇ ಮುಗಿಬಿದ್ದರು. ಈ ಕಾರಣಕ್ಕೆ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗನಿಗೆ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿ ರೇವತಿ ಪತಿ ದೂರು ನೀಡಿದ್ದರು. ಈ ಬೆನ್ನಲ್ಲೇ ಎಫ್ಐಆರ್ ದಾಖಲಿಸಿರುವ ಪೊಲೀಸರು, ಅಲ್ಲು ಅರ್ಜುನ್ ಅವರನ್ನು ಎ11 ಆರೋಪಿ ಆಗಿ ಮಾಡಿದ್ದಾರೆ.
Advertisement