ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2: ದಿ ರೂಲ್ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವುದರೊಂದಿಗೆ ಹಲವು ದಾಖಲೆಗಳನ್ನು ಮುರಿದಿದೆ. ಕಳೆದ 10 ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ರೂ, 1,292 ಕೋಟಿ ಕಲೆಕ್ಷನ್ ಮಾಡುವುದರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಕಲೆಕ್ಷನ್ ದಾಖಲೆಯನ್ನು ಮುರಿದಿದೆ.
ಚಿತ್ರದ ನಿರ್ಮಾಪಕರು ಭಾನುವಾರ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸುಕುಮಾರ್ ನಿರ್ದೇಶನದ ತೆಲುಗು ಚಿತ್ರ ಡಿಸೆಂಬರ್ 5 ರಂದು ಹಿಂದಿ, ತಮಿಳು, ಕನ್ನಡ , ಬೆಂಗಾಳಿ ಹಾಗೂ ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಚಿತ್ರದ ಇತ್ತೀಚಿನ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್, 2024ರಲ್ಲಿ ದೇಶದಲ್ಲಿ ಅತ್ಯಂತ ಹೆಚ್ಚಿನ ಕಲೆಕ್ಷನ್ ಮಾಡಿದ ಸಿನಿಮಾ, 10 ದಿನಗಳಲ್ಲಿ ವಿಶ್ವದಾದ್ಯಂತ ರೂ. 1,292 ಕೋಟಿ ಬಾಚಿದೆ ಎಂದು ಟ್ವೀಟ್ ಮಾಡಿದೆ. ಹಿಂದಿ ವರ್ಸನ್ ನಲ್ಲಿ ರೂ. 507.50 ಕೋಟಿ ಕಲೆಕ್ಷನ್ ಮೂಲಕ ಕಡಿಮೆ ಅವಧಿಯಲ್ಲಿ ಹಿಂದಿಯಲ್ಲಿ ರೂ. 500 ಕೋಟಿ ದಾಟಿದ ಮೊದಲ ಸಿನಿಮಾ ಎಂದು ನಿರ್ಮಾಪಕರು ಹೇಳಿದ್ದಾರೆ.
ಪುಷ್ಪ-2 ಪ್ರೀಮಿಯರ್ ಶೋ ವೇಳೆಯಲ್ಲಿ ನಡೆದ ನೂಕುನುಗ್ಗಲಿನಲ್ಲಿ ಮಹಿಳೆ ಸಾವಿನ ಪ್ರಕರಣದಲ್ಲಿ ಜೈಲು ಸೇರಿದ ಅಲ್ಲು ಅರ್ಜುನ್ ಶನಿವಾರ ಬೆಳಗ್ಗೆ ಬಿಡುಗಡೆಯಾಗಿದ್ದರು. ಮಾರನೇ ದಿನವೇ ಪುಷ್ಪ-2 ಚಿತ್ರದ ಇತ್ತೀಚಿನ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರವನ್ನು ಬಹಿರಂಗಗೊಳಿಸಲಾಗಿದೆ.