ಫಾರ್ ರಿಜಿಸ್ಟ್ರೇಷನ್ ಸಿನಿಮಾ ಮೂಲಕ ಯಶಸ್ವಿ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನವೀನ್ ದ್ವಾರಕಾನಾಥ್ ಅವರು ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ.
ನವೀನ್ ಅವರ ಗುರು ಕೆ.ಚಂದ್ರಶೇಖರ್ ಅವರೇ ಈ ಚಿತ್ರಕ್ಕೆ ಕಥೆ ಬರೆದು, ನಿರ್ಮಾಣದ ಹೊಣೆ ಹೊತ್ತಿರುವುದು ಈ ಚಿತ್ರದ ವಿಶೇಷವಾಗಿದೆ.
ಚಂದ್ರಶೇಖರ್ ಅವರಿಗೆ ಕನ್ನಡ ಚಿತ್ರರಂಗವೇನು ಹೊಸತಲ್ಲ. ಈ ಹಿಂದೆ ರಮೇಶ್ ಅರವಿಂದ್ ನಟನೆಯ “ಓ ಮಲ್ಲಿಗೆ” ಚಿತ್ರದ ಪ್ರಸಿದ್ಧ ಹಾಡಿಗೆ ಕೋರಿಯೋಗ್ರಫಿ ನೀಡಿದ್ದರು. ಆ ಕಾಲದಲ್ಲೇ ತಮ್ಮ ಶೈಲಿಯಿಂದ ಗುರುತಿಸಿಕೊಂಡಿದ್ದರು.
ವಿ ಮನೋಹರ್ ನಿರ್ದೇಶನ ಹಾಗೂ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಹಾಡು ಅಂದು ದೊಡ್ಡಮಟ್ಟದ ಹಿಟ್ ಕಂಡಿತ್ತು. ರಮೇಶ್ ಅರವಿಂದ್ ಸ್ಟೈಲ್, ಸಂಗೀತ ಹಾಗೂ ಕೋರಿಯೋಗ್ರಫಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಮತ್ತೆ ನಿರ್ಮಾಪಕನಾಗಿ ಮರಳಿರುವ ಚಂದ್ರಶೇಖರ್ ಅವರು, “ಅಪಾರ ಸ್ಟುಡಿಯೋಸ್” ಬ್ಯಾನರ್ ಅಡಿಯಲ್ಲಿ ನವೀನ್ ಅವರ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರವು ಆಕ್ಷನ್ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದ್ದು, ಸದ್ಯ ಕಥೆ ಬರವಣಿಗೆಯ ಕೊನೆ ಹಂತದಲ್ಲಿದೆ.
ಇದು ನಂಬಿಕೆ, ಮಾರ್ಗದರ್ಶನ ಮತ್ತು ದೃಷ್ಟಿಯ ಸಹಯೋಗವಾಗಿದ್ದು, ಚಿತ್ರಕಥೆ ಕೆಲಸ ಪೂರ್ಣಗೊಳ್ಳುತ್ತಿದ್ದಂತೆಯೇ ಏಕಕಾಲದಲ್ಲಿ ತಾರಾಗಣ, ಸಿಬ್ಬಂದಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ನವೀನ್ ದ್ವಾರಕಾನಾಥ್ ಹೇಳಿದ್ದಾರೆ.