ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2: ದಿ ರೂಲ್ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದಾಗಿನಿಂದ ಗಲ್ಲಾಪೆಟ್ಟಿಗೆಯಲ್ಲಿ ಮೊದಲನೇ ಸ್ಥಾನ ಉಳಿಸಿಕೊಂಡು ಸಾಗಿದೆ. ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 1,200 ಕೋಟಿ ರೂ. ಗಳಿಸುವ ಹಾದಿಯತ್ತ ಮುನ್ನುಗ್ಗುತ್ತಿದೆ.
ಪುಷ್ಪ 2 ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ 725.8 ಕೋಟಿ ರೂ., ಎರಡನೇ ವಾರ 264.8 ಕೋಟಿ ರೂ. ಮತ್ತು ಮೂರನೇ ವಾರ 129.5 ಕೋಟಿ ರೂ. ಗಳಿಸಿದೆ. ನಾಲ್ಕನೇ ವಾರದ ಶುಕ್ರವಾರ 8.75 ಕೋಟಿ ರೂ., ಶನಿವಾರ 12.5 ಕೋಟಿ ರೂ., ಭಾನುವಾರ 15.65 ಕೋಟಿ ರೂ. ಮತ್ತು ನಾಲ್ಕನೇ ಸೋಮವಾರ 6.65 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇದರೊಂದಿಗೆ, ಇತ್ತೀಚೆಗಷ್ಟೇ ಬಿಡುಗಡೆಯಾದ ಅಲ್ಲು ಅರ್ಜುನ್ ನಟನೆಯ ಚಿತ್ರವು ದೇಶದ ಬಾಕ್ಸ್ ಆಫೀಸ್‌ನಲ್ಲಿ ತನ್ನ 26ನೇ ದಿನಕ್ಕೆ ಒಟ್ಟು 1,163.65 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಪುಷ್ಪ 2ರ ಹಿಂದಿ ಆವೃತ್ತಿಯಲ್ಲಿ 758.65 ಕೋಟಿ ರೂ. ಗಳಿಸಿದ್ದರೆ, ತೆಲುಗು ಆವೃತ್ತಿಯಲ್ಲಿ 326.31 ಕೋಟಿ ರೂ. ಸಂಗ್ರಹಿಸಿವೆ.
ಚಿತ್ರದ ತಮಿಳು, ಮಲಯಾಳಂ ಮತ್ತು ಕನ್ನಡ ಆವೃತ್ತಿಯಲ್ಲಿ ಕ್ರಮವಾಗಿ 56.95 ಕೋಟಿ ರೂ., 14.12 ಕೋಟಿ ರೂ. ಮತ್ತು 7.62 ಕೋಟಿ ರೂ. ಗಳಿಸಿವೆ. ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಪುಷ್ಪ 2ರ ಹಿಂದಿ ಪ್ರದರ್ಶನಗಳು ಒಟ್ಟಾರೆ ಶೇ 16.48 ರಷ್ಟು ಥಿಯೇಟರ್ ಆಕ್ಯುಪೆನ್ಸಿ ಹೊಂದಿದ್ದು, ಅದರ ತೆಲುಗು ಪ್ರದರ್ಶನಗಳು ಒಟ್ಟಾರೆ ಶೇ 16.23 ರಷ್ಟು ಆಕ್ಯುಪೆನ್ಸಿ ಹೊಂದಿವೆ.
ಈಮಧ್ಯೆ, ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅಲ್ಲು ಅರ್ಜುನ್ ಅವರನ್ನು ಬೆಂಬಲಿಸಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಇಂತಹ ಘಟನೆಗಳಲ್ಲಿ ಪೊಲೀಸರನ್ನು ದೂಷಿಸುವುದಿಲ್ಲ ಎಂದು ಕಲ್ಯಾಣ್ ಹೇಳಿದ್ದಾರೆ.
ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಚಿತ್ರವು 2021 ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ಚಲನಚಿತ್ರ ಪುಷ್ಪ: ದಿ ರೈಸ್‌ನ ಮುಂದುವರಿದ ಭಾಗವಾಗಿದೆ. ಡಿಸೆಂಬರ್ 5 ರಂದು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಪುಷ್ಪ 2 ಚಿತ್ರಮಂದಿರಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ.