ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ತನ್ನ ಕಾರ್ಯದಿಂದ ವ್ಯಾಪಕ ಮನ್ನಣೆ ಗಳಿಸಿದ ನಟಿ ತನಿಷಾ ಕುಪ್ಪಂಡ ಮುಂಬರುವ ಚಿತ್ರ 'ಪೆನ್ ಡ್ರೈವ್' ನಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶೀರ್ಷಿಕೆ ಮತ್ತು ತಾರಾಗಣದ ಬಗ್ಗೆ ಇತ್ತೀಚೆಗೆ ಘೋಷಿಸಲಾಯಿತು.
ಈ ಹಿಂದೆ 15 ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಸೆಬಾಸ್ಟಿನ್ ಡೇವಿಡ್ 'ಪೆನ್ ಡ್ರೈವ್' ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಲಯನ್ ಆರ್ ವೆಂಕಟೇಶ್ ಮತ್ತು ಲಯನ್ ಎಸ್ ವೆಂಕಟೇಶ್ ಚಿತ್ರದ ನಿರ್ಮಾಪಕರಾಗಿದ್ದಾರೆ.. "ಈವರೆಗೂ ಹದಿನೈದು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. ಪೆನ್ ಡ್ರೈವ್ ಶೀರ್ಷಿಕೆ ನೀಡಿದ ವಾಣಿಜ್ಯ ಮಂಡಳಿಗೆ ಧನ್ಯವಾದ. ಪ್ರಸ್ತುತ ಚಾಲ್ತಿಯಲ್ಲಿರುವ ಪೆನ್ ಡ್ರೈವ್ಗೂ ನಮ್ಮ ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದ ಕಥೆಯೇ ಬೇರೆ. ನಮ್ಮ ಚಿತ್ರದಲ್ಲಿ ಪೆನ್ ಡ್ರೈವ್ ಮುಖ್ಯಪಾತ್ರ ವಹಿಸುತ್ತದೆ. ಹಾಗಾಗಿ ಆ ಶೀರ್ಷಿಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಲಯನ್ ಎಸ್.ವೆಂಕಟೇಶ್ ಹಾಗೂ ಲಯನ್ ಆರ್.ವೆಂಕಟೇಶ್ ಅವರ ಸಹಕಾರದಿಂದ ಚಿತ್ರವನ್ನು ಶೀಘ್ರ ತೆರೆಗೆ ತರುವ ಪ್ರಯತ್ನ ಮಾಡುತ್ತೇನೆ" ಎಂದು ತಿಳಿಸಿದರು.
ತನಿಶಾ ಕುಪ್ಪಂಡ ಜೊತೆಗೆ, ಚಿತ್ರದ ತಾರಾಗಣದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಮತ್ತು ಗೀತಾ ಪ್ರಿಯಾ ಸೇರಿದಂತೆ ಇತರರು ಇದ್ದಾರೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಬರೆಯಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ನಡೆಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.