ಬೆಂಗಳೂರು: ಆಂಧ್ರ ಪ್ರದೇಶದ ವಿವಾದಿತ ಜ್ಯೋತಿಷಿ ವೇಣುಸ್ವಾಮಿ ಕನ್ನಡದ ಖ್ಯಾತ ನಟಿ ನಿಶ್ವಿಕಾ ನಾಯ್ಡು ಅವರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದು, ವಿಶೇಷ ಪೂಜೆಯಲ್ಲಿ ತೊಡಗಿರುವ ಫೋಟೋಗಳು ವ್ಯಾಪಕ ವೈರಲ್ ಆಗುತ್ತಿವೆ.
ಹೌದು.. ತಮ್ಮ ವಿವಾದಾತ್ಮಕ ಹೇಳಿಕೆ ಮತ್ತು ಭವಿಷ್ಯ ನುಡಿಯುವಿಕೆಯಿಂದಲೇ ಕುಖ್ಯಾತಿ ಗಳಿಸಿರುವ ವೇಣುಸ್ವಾಮಿ ಕನ್ನಡದ ಖ್ಯಾತ ನಟಿ ನಿಶ್ವಿಕಾ ನಾಯ್ಡು ಅವರ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಅವರು ವೇಣು ಸ್ವಾಮಿ ಬಳಿ ಪೂಜೆ ಮಾಡುತ್ತಿರೋ ವಿಡಿಯೋವನ್ನು ಜ್ಯೋತಿಷಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮದ್ಯ, ಮಾಂಸ ನೈವೇದ್ಯ
ವೈರಲ್ ಆದ ವಿಡಿಯೋದಲ್ಲಿ ಸೂರ್ಯನ ರೀತಿ ರಂಗೋಲಿ, ಅದರ ಮೇಲೆ ಐದು ತೆಂಗಿನಕಾಯಿ ಕಳಶ ನಿರ್ಮಿಸಲಾಗುತ್ತದೆ. ಸುತ್ತಲೂ ಹೂಗಳಿಂದ ಅಲಂಕರಿಸಿ, ಮದ್ಯ ಮತ್ತು ಮೀನು, ಮಾಂಸವನ್ನು ಇರಿಸಿ ಯಾಗ ನೆರವೇರಿಸಲಾಗಿದೆ. ನಟಿ ನಿಶ್ವಿಕಾ ಅವರಿಂದಲೂ ಮಂತ್ರ ಪಠಣ ಮಾಡಿಸಿ, ಯಾಗದ ಮಧ್ಯಭಾಗಕ್ಕೆ ಎಡಗೈಯಿಂದ ಹೂಗಳನ್ನು ಹಾಕಿಸಿದ್ದಾರೆ. ಪೂಜೆ ಮುಗಿದ ಬಳಿಕ ಕರಟಕ ದಮನಕ ಸಿನಿಮಾದಲ್ಲಿ ಪ್ರಭುದೇವ ಅವರ ಜತೆಗೆ ನಿಶ್ವಿಕಾ ಕುಣಿದ ಹಾಡನ್ನು ವೀಕ್ಷಿಸಿದ್ದಾರೆ.
ತೆಲುಗು ನಟಿಯರಿಗೆ ಪೂಜೆ ಮಾಡಿದ್ದ ವೇಣು ಸ್ವಾಮಿ
ಇನ್ನು ತೆಲುಗು ಚಿತ್ರರಂಗದ ಖ್ಯಾತ ನಟ, ನಟಿಯರು ವೇಣುಸ್ವಾಮಿ ಪೂಜಾಫಲವನ್ನ ಹೆಚ್ಚಾಗಿ ನಂಬುತ್ತಾರೆ. ಸೆಲಬ್ರಿಟಿಗಳಿಗೆ ಸಂಕಷ್ಟ ಎದುರಾದಾಗ ಅದರಿಂದ ಪಾರಾಗಲು ವೇಣುಸ್ವಾಮಿಯ ಮೊರೆ ಹೋಗುತ್ತಾರೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರು ಇವರಿಂದ ಪೂಜೆ ಮಾಡಿಸಿದ್ದರು.
ಇದೀಗ ಸ್ಯಾಂಡಲ್ವುಡ್ ನಟಿ ಕೂಡ ವೇಣು ಸ್ವಾಮಿ ಅವರಿಂದ ಪೂಜೆ ಮಾಡಿಸಿಕೊಂಡಿದ್ದಾರೆ. ಸದ್ಯ ನಿಶ್ವಿಕಾ ನಾಯ್ಡು ಕಿರುತೆರೆಯ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.
ವಿವಾದಿತ ಜ್ಯೋತಿಷಿ
ವೇಣುಸ್ವಾಮಿ ಕೇವಲ ಪೂಜೆಗಳಿಂದ ಮಾತ್ರವಲ್ಲ.. ತಮ್ಮ ವಿವಾದಾತ್ಮಕ ಹೇಳಿಕೆ ಮತ್ತು ಭವಿಷ್ಯ ನುಡಿಯುವಿಕೆಯಿಂದಲೂ ಕುಖ್ಯಾತಿ ಗಳಿಸಿದ್ದಾರೆ. ಈ ಹಿಂದೆ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಫ್ಲಾಪ್ ಆಗುತ್ತೆ. ರಾಮ್‌ಚರಣ್, ಉಪಾಸನಾ ದಂಪತಿಗೆ ಹೆಣ್ಣು ಮಗುವೇ ಆಗುತ್ತೆ. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಆಗಲ್ಲ ಎಂದು ಹೇಳಿದ್ದರು.
ಅಷ್ಟೇ ಅಲ್ಲ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಮುಂದಿನ ಕಿಂಗ್ ಮೇಕರ್.. ಎಂದೆಲ್ಲಾ ಭವಿಷ್ಯ ನುಡಿದಿದ್ದ ವೇಣುಸ್ವಾಮಿ ಇತ್ತೀಚೆಗೆ ನಡೆದ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಮತ್ತೆ ವೈಎಸ್ ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿ ಇದೀಗ ಜಗನ್ ಮೋಹನ್ ರೆಡ್ಡಿ ಅಧಿಕಾರ ಕಳೆದುಕೊಂಡ ಬಳಿಕ ವೇಣುಸ್ವಾಮಿ ವಿರುದ್ಧ ವ್ಯಾಪಕ ಟ್ರೋಲ್ ಗಳು ನಡೆಯುತ್ತಿವೆ.