ಪ್ರೇಮಲೋಕ (1987) ಸೂಪರ್‌ಹಿಟ್ ಸಿನಿಮಾ ನಿರ್ದೇಶಕ ಮತ್ತು ನಟ ರವಿಚಂದ್ರನ್ ಇದೀಗ 'ಪ್ರೇಮಲೋಕ 2' ಮೂಲಕ ಇತಿಹಾಸವನ್ನು ಮರುಸೃಷ್ಟಿಸಲು ಸಜ್ಜಾಗುತ್ತಿದ್ದಾರೆ. ಸದ್ಯ ಚಿತ್ರಕಥೆಯ ಹಂತದಲ್ಲಿರುವ ಚಿತ್ರದಲ್ಲಿ ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ರವಿಚಂದ್ರನ್ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥಾವಸ್ತು ಮತ್ತು ಇತರ ವಿವರಗಳನ್ನು ಮುಚ್ಚಿಟ್ಟಿದ್ದರೂ, ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಹುಟ್ಟುಹಬ್ಬದಂದು (ಮೇ 30) ಪ್ರೇಮಲೋಕ 2 ಅನ್ನು ಅಧಿಕೃತವಾಗಿ ಪ್ರಾರಂಭಿಸಲಾಗುವುದು ಮತ್ತು ಚಿತ್ರಕ್ಕಾಗಿ 25 ಹಾಡುಗಳನ್ನು ರಚಿಸುವುದಾಗಿ ಘೋಷಿಸಿದ್ದರು.
ಈಮಧ್ಯೆ, ಚಿತ್ರದ ನಾಯಕಿ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ನಾಯಕಿಯರ ಆಯ್ಕೆಗೆ ಹೆಸರುವಾಸಿಯಾಗಿರುವ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ಇತರ ಭಾಷೆಗಳಿಂದ ಟಾಪ್ ನಾಯಕಿಯರನ್ನು ಕರೆತಂದಿದ್ದಾರೆ. ಪ್ರೇಮಲೋಕದಲ್ಲಿ ನಟಿ ಜೂಹಿ ಚಾವ್ಲಾ ಅವರನ್ನು ಕರೆತಂದಿದ್ದಾರೆ. ಕ್ರೇಜಿ ಸ್ಟಾರ್ ಅವರ ಮುಂದಿನ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲವಾದರೂ, ತೇಜು ಅಶ್ವಿನಿ ಅವರು ಪ್ರೇಮಲೋಕ 2ಗೆ ನಾಯಕಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡ್ಯಾನ್ಸರ್ ಮತ್ತು ನೃತ್ಯ ಸಂಯೋಜಕಿಯಾಗಿರುವ ತೇಜು ಅಶ್ವಿನಿ ಅವರು ಕಲ್ಯಾಣ ಸಮಯಲ್ ಸಧಮ್ ಸರಣಿ ಮೂಲಕ ಮನ್ನಣೆ ಗಳಿಸಿದರು ಮತ್ತು ಎನ್ನ ಸೊಲ್ಲ ಪೊಗಿರೈ, ಮೂಂಡ್ರಮ್ ಕನ್ ಮತ್ತು ಕಾತು ವಾಕುಲಾ ರೆಂಡು ಕಾದಲ್ ಮುಂತಾದ ಚಿತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ತೇಜು ಕಳೆದ ಆರು ತಿಂಗಳಿನಿಂದ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಪ್ರೇಮಲೋಕ 2 ಚಿತ್ರತಂಡದೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರು ನಾಯಕ ಮನೋರಂಜನ್ ಅವರೊಂದಿಗೆ ಒಂದೆರಡು ಬಾರಿ ಕಾಣಿಸಿಕೊಂಡಿದ್ದಾರೆ ಮತ್ತು ಇತ್ತೀಚೆಗೆ ಅವರು ಚಿತ್ರರಂಗದ ಕೆಲವು ಆಪ್ತರಿಗೆ ಪ್ರೇಮಲೋಕ 2 ನಾಯಕಿಯಾಗಿ ಅವರನ್ನು ಪರಿಚಯಿಸುವ ಚರ್ಚೆ ನಡೆದಿದೆ ಎನ್ನಲಾಗಿದೆ. ಚಿತ್ರತಂಡದಿಂದ ಅಧಿಕೃತ ಪ್ರಕಟಣೆಗಾಗಿ ಎದುರುನೋಡುತ್ತಿದ್ದು, ತೇಜು ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.