ಕೊಚ್ಚಿ: ಖ್ಯಾತ ಸಿನಿಮಾ ಸಂಕಲನಕಾರ ನಿಶಾದ್ ಯೂಸುಫ್ ಇಂದು ಮುಂಜಾನೆ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಡರಾತ್ರಿ 2 ಗಂಟೆ ಸುಮಾರಿಗೆ ಪಣಂಪಳ್ಳಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವ ಪತ್ತೆಯಾಗಿದೆ. ನಿಶಾದ್ ಅವರ ಸಾವನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಯಾವುದೇ ಡೆತ್ ನೋಟ್ ಕೂಡ ಸಿಕ್ಕಿಲ್ಲ, ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೆ ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ.
‘ತಲ್ಲುಮಾಲ’ ಸಿನಿಮಾದ ಅತ್ಯುತ್ತಮ ಸಂಕಲನಕ್ಕಾಗಿ 2022ರಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ನಿಶಾದ್ ಅವರು, ಚಾವೆರ್, ಉಂಡಾ, ಸೌದಿ ವೆಲ್ಲಕ್ಕ, ಒನ್, ಆಪರೇಷನ್ ಜಾವಾ, ಬಾಜೂಕಾ, ಮತ್ತು ಕಂಗುವ ಮುಂತಾದ ಚಿತ್ರಗಳಿಗೆ ಸಂಕಲನ ಮಾಡಿದ್ದಾರೆ. ನಟ ಮಮ್ಮುಟಿ ಅಭಿನಯದ ‘ಬಾಜೂಕಾ’ ಮತ್ತು ತಮಿಳು ನಟ ಸೂರ್ಯ ನಟನೆಯ ‘ಕಂಗುವ’ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (ಫೆಫ್ಕಾ) ನಿರ್ದೇಶಕರ ಒಕ್ಕೂಟವು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಸಾವಿನ ಸುದ್ದಿ ಖಚಿತಪಡಿಸಿದೆ.