ನಟ ಪ್ರವೀಣ್ ತೇಜ್ ಮತ್ತು ಅಂಜಲಿ ಅನಿಶ್ ಅಭಿನಯದ ಜಂಬೂ ಸರ್ಕಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆ ಚಿತ್ರ ತೆರೆಗೆ ಬರಲಿದೆ.
ಪೊರ್ಕಿ, ಬುಲ್ ಬುಲ್'ನಂತಹ ಹಿಟ್ ಚಿತ್ರಗಳ ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸ್ನೇಹ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಬಳಿಕ ಚಿತ್ರತಂಡದವರು ಚಿತ್ರದ ಕುರಿತು ಅನುಭವ ಹಂಚಿಕೊಂಡರು.
ಚಿತ್ರದ ಕುರಿತು ಮಾಹಿತಿ ನೀಡಿದ ಎಂಡಿ.ಶ್ರೀಧರ್ ಅವರು, ಆತ್ಮೀಯ ಗೆಳೆಯರಿಬ್ಬರು ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ, ಒಂದೇ ಮಂಟಪದಲ್ಲಿ, ಒಂದೇ ದಿನ ಮದುವೆಯಾಗಿ, ಒಂದೇ ಏರಿಯಾದಲ್ಲಿ ಮನೆ ಮಾಡುತ್ತಾರೆ. ಇವರ ಗೆಳೆತನ ಇಷ್ಟವಿರದ ಹೆಂಡತಿಯರು ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ಸದಾ ಕಚ್ಚಾಡುತ್ತಲೇ ಬೆಳೆದ ನಾಯಕ-ನಾಯಕಿ ಇಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಚಿತ್ರದಲ್ಲಿ ಹಾಸ್ಯಮಯ ರೀತಿಯಲ್ಲಿ ಹೇಳಿದ್ದೇವೆ. ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೇ ತಿಂಗಳ ಮೂರನೇ ವಾರ ಅಥವಾ ಕೊನೆವಾರ ಬಿಡುಗಡೆ ಮಾಡುವ ಯೋಜನೆಯಿದೆ. ಕವಿರಾಜ್ ಬರೆದಿರುವ 2 ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಚೆಲ್ಲಾಟ ಚಿತ್ರದಿಂದಲೂ ಅವರು ನಮ್ಮ ಜೊತೆ ಇದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಎಂದು ಹೇಳಿದರು.
ಜಂಬೂ ಸರ್ಕಸ್ ಚಿತ್ರವನ್ನು ಶ್ರೀ ಮಹತಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಹೆಚ್ ಸಿ ಸುರೇಶ್ ನಿರ್ಮಿಸಿದ್ದಾರೆ ಮತ್ತು ಸುಪ್ರೀತಾ ಶೆಟ್ಟಿ ಸಹ-ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಅಚ್ಯುತ್ ಕುಮಾರ್, ಲಕ್ಷ್ಮಿ ಸಿದ್ದಯ್ಯ, ಸ್ವಾತಿ, ಅವಿನಾಶ್, ಮತ್ತು ರವಿಶಂಕರ್ ಗೌಡ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಎ.ವಿ ಕೃಷ್ಣಕುಮಾರ್ ಕ್ಯಾಮರಾ ವರ್ಕ್ ಇದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ, ಡಾ.ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.