ಭಾರತೀಯ ಚಿತ್ರರಂಗದ ಸಂಗೀತ ಲೋಕದಲ್ಲಿ ಕೆ.ಎಸ್.ಚಿತ್ರಾ ಅವರ ಧ್ವನಿ ಸ್ಫಟಿಕದಂತೆ. ಕನ್ನಡ, ಮಲಯಾಳಂ, ತಮಿಳು, ಹಿಂದಿ, ತೆಲುಗು ಮತ್ತು ಬಹುತೇಕ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ (ಕೆಲವು ವಿದೇಶಿ ಭಾಷೆಗಳನ್ನು ಸೇರಿಸಿಕೊಂಡು) ಸರಾಗವಾಗಿ, ಇಂಪಾಗಿ, ನಯವಾಗಿ, ಸುಮಧುರವಾಗಿ ಹಾಡುವ ಕೆ ಎಸ್ ಚಿತ್ರಾ ಅವರ ಧ್ವನಿಗೆ ಮರುಳಾಗದವರಿಲ್ಲ.
ಕನ್ನಡದಲ್ಲಿ ಬೆಳ್ಳಿ ಕಾಲುಂಗುರ (1992) ಚಿತ್ರದ ಕೇಳಿಸದೆ ಕಲ್ಲು ಕಲ್ಲಿನಲಿ, ಅಮೃತವರ್ಷಿಣಿ (1997) ಚಿತ್ರದ ತುಂತುರು ಅಲ್ಲಿ ನೀರ ಹಾಡ, ಗಾಳಿಪಟ (2008) ದ ನದೀಮ್ ದೀಮ್ ಥನಾ ಮುಂತಾದ ಅವರ ಹಿನ್ನೆಲೆ ಸಂಗೀತ ಹಿಟ್ ಆಗಿದ್ದು, ಕನ್ನಡ ಭಾಷಿಕರಿಗೆ ಬಹಳ ಅಚ್ಚುಮೆಚ್ಚು ಮತ್ತು ಚಿರಪರಿಚಿತ. ಅವರು ಕನ್ನಡದವರಲ್ಲ ಎಂದರೆ ಹಲವರಿಗೆ ಅಚ್ಚರಿಯಾಗಬಹುದು.
ಇಂದು ಶನಿವಾರ ಅವರು ಬೆಂಗಳೂರಿನಲ್ಲಿದ್ದು, ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ಅವರು ಮಾತನಾಡದ ಭಾಷೆಗಳಲ್ಲಿನ ಹಾಡುಗಳ ಭಾವನಾತ್ಮಕ ಸಾರವನ್ನು ಸೆರೆಹಿಡಿದು ಹಾಡುವುದು ಹೇಗೆ ಎಂದು ಕೇಳಿದಾಗ, ಹಾಡಿನ ಸಾಹಿತ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಎನ್ನುತ್ತಾರೆ.
ನಾನು ಸಂಗೀತ ಸಂಯೋಜಕರು/ನಿರ್ದೇಶಕರನ್ನು ಹಾಡಿನ ಪರಿಸ್ಥಿತಿ, ಕೆಲವು ಪದಗಳ ಅರ್ಥವನ್ನು ಕೇಳುತ್ತೇನೆ, ಹಾಡಿನ ಸಂದರ್ಭ, ಪರಿಸ್ಥಿತಿ ಮತ್ತು ಅದನ್ನು ಹೇಗೆ ಚಿತ್ರೀಕರಣ ಮಾಡಲಿದ್ದಾರೆ ಎಂದು ನನಗೆ ಹೇಳುತ್ತಾರೆ. ಇದರಿಂದ ಹಾಡಿನ ಸಾಲುಗಳನ್ನು ಅರ್ಥ ಮಾಡಿಕೊಂಡು ಭಾವನೆ ನೀಡಿ ಸಾಧ್ಯವಾದಷ್ಟು ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.
ತಮ್ಮ 46 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, 'ದಿ ನೈಟಿಂಗೇಲ್ ಆಫ್ ಸೌತ್ ಇಂಡಿಯಾ' ಎಂದು ಖ್ಯಾತಿ ಗಳಿಸಿರುವ ಚಿತ್ರಾ ಅವರು ಖ್ಯಾತ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್, ಇಳಯರಾಜ, ಎಂ.ಎಂ. ಕೀರವಾಣಿಯಂತಹ ದಿಗ್ಗಜ ಸಂಗೀತಗಾರರೊಂದಿಗೆ, ವಿಶೇಷವಾಗಿ ಕನ್ನಡ ಸಂಗೀತ ಉದ್ಯಮದಲ್ಲಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಹಂಸಲೇಖಾ ಅವರೊಂದಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ.
ಹಂಸಲೇಖಾ ಅವರೊಂದಿಗೆ ಕನ್ನಡದಲ್ಲಿ ಕೆಲಸ ಮಾಡಿರುವ ಬಗ್ಗೆ ತಮ್ಮ ಅನುಭವವನ್ನು ಹೇಳಿಕೊಂಡ ಚಿತ್ರಾ, ಹಂಸಲೇಖ ಅವರು ವೈಯಕ್ತಿಕವಾಗಿ ಛಾಪು ಮೂಡಿಸಿರುವ ವ್ಯಕ್ತಿ. ನಾವು ಅವರ ಹಾಡನ್ನು ಕೇಳಿದಾಗಲೆಲ್ಲಾ, ಅದು ಅವರೇ ಸಂಯೋಜಿಸಿದ ಸಂಗೀತ ಎಂದು ಗೊತ್ತಾಗುತ್ತದೆ. ಸಲೀಲ್ ಚೌಧರಿಯಂತೆಯೇ, ಹಂಸಲೇಖಾ ಕೂಡ ಒಂದು ವಿಶಿಷ್ಟ ಶೈಲಿಯನ್ನು ಹೊಂದಿದ್ದಾರೆ. ಅವರೆಲ್ಲರ ಜೊತೆ ಕೆಲಸ ಮಾಡಿದ್ದು ನನಗೆ ಸಾಕಷ್ಟು ಅನುಭವ ನೀಡಿದೆ. ಸಂಗೀತ ದಿಗ್ಗಜರಿಂದ ಸಾಕಷ್ಟು ಕಲಿತಿದ್ದೇನೆ ಎನ್ನುತ್ತಾರೆ.
ಪದ್ಮಭೂಷಣ, ಪದ್ಮಶ್ರೀ, ಆರು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಇನ್ನೂ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಚಿತ್ರಾ ಸಂಗೀತ ಕಚೇರಿಗಳನ್ನು ನಡೆಸುತ್ತಾರೆ. ಸ್ಪಾಟಿಫೈನಲ್ಲಿ ಮಾಸಿಕ ಸುಮಾರು 1.3 ಕೋಟಿ ಕೇಳುಗರ ಸಂಖ್ಯೆಯನ್ನು ಹೊಂದಿದ್ದಾರೆ.
ಇಂತಹ ಸಂಗೀತಗಾರ್ತಿಗೆ ತಮ್ಮ ವೃತ್ತಿಜೀವನದಲ್ಲಿ ಕಹಿ ಅನುಭವಗಳಾಗಿವೆಯೇ ಎಂದು ಕೇಳಿದಾಗ, ಅಂತಹ ತೀರಾ ಕೆಟ್ಟ ಅನುಭವಗಳಾಗಿಲ್ಲ. ಕೆಲವೊಮ್ಮೆ, ನಿಮ್ಮ ಕೆಲವು ಹಾಡುಗಳನ್ನು ಯಾವುದೇ ಕಾರಣವಿಲ್ಲದೆ ಅಥವಾ ತಿಳಿಸದೆ ಬದಲಾಯಿಸಿದಾಗ ಸ್ವಲ್ಪ ಬೇಸರವಾಗುತ್ತದೆ. ಆದರೆ ನಾನು ಅದನ್ನು ನನ್ನ ಹೃದಯಕ್ಕೆ ತೆಗೆದುಕೊಳ್ಳುವುದಿಲ್ಲ. ಸಂಗೀತವನ್ನು ಹೊರತುಪಡಿಸಿ ಬೇರೆ ವಿಷಯಗಳಲ್ಲಿ ನನಗೆ ಆಸಕ್ತಿ ಇಲ್ಲ. ಬಹುಶಃ ನಾನು ಇನ್ನೂ ಸಂಗೀತದ ಕಾರಣದಿಂದಾಗಿ ಜೀವಂತವಾಗಿದ್ದೇನೆ ಅನಿಸುತ್ತದೆ ಎಂದರು.
ಅಂದು ನನ್ನ ಜೀವನದ ಬಹಳ ದುಃಖದ ದಿನ
2011 ರಲ್ಲಿ ನನ್ನ ಜೀವನದ ಅತ್ಯಂತ ವಿನಾಶಕಾರಿ ಘಟನೆ ನಡೆದಾಗ ಸಂಗೀತವೇ ನನ್ನ ದುಃಖವನ್ನು ಮರೆಯಲು ಸಹಾಯ ಮಾಡಿದ್ದು, 2011ರಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಅವರ 8 ವರ್ಷದ ಮಗಳು ಮೃತಪಟ್ಟಿದ್ದರು. "ನನ್ನ ಮಗಳನ್ನು ಕಳೆದುಕೊಂಡಾಗ, ಜೀವನದಲ್ಲಿ ದೊಡ್ಡ ಹೊಡೆತ ಉಂಟಾಯಿತು. ಅಂತಹ ದುಃಖದ ಗಳಿಗೆಯಿಂದ ನನ್ನನ್ನು ಹೊರತಂದು ಎತ್ತಿದ್ದು ಸಂಗೀತವೇ. ಅದು ನನ್ನ ಪ್ರೇರಕ ಶಕ್ತಿ ಎನ್ನುತ್ತಾರೆ.
ಸಂಗೀತ ಕಚೇರಿ ಕೊಡುವಾಸೆ
ಇಷ್ಟೆಲ್ಲಾ ಸಾಧನೆ ಮಾಡಿದ ನಂತರ, ಶಾಸ್ತ್ರೀಯವಾಗಿ ಸಂಗೀತ ತರಬೇತಿ ಪಡೆದ 61 ವರ್ಷದ ಗಾಯಕಿ ಚಿತ್ರಾ ಇನ್ನೂ ಅನ್ವೇಷಿಸದ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕರ್ನಾಟಕ ಸಂಗೀತ ಕಚೇರಿಯನ್ನು ಜನರ ಮುಂದೆ ಪ್ರದರ್ಶಿಸುವುದು. ನಾನು ಕರ್ನಾಟಕ ಸಂಗೀತವನ್ನು ಕಲಿತಿದ್ದೇನೆ, ಆದರೆ ನಾನು ಕಲಿತದ್ದೆಲ್ಲವೂ ಸಂಗೀತ ಕಚೇರಿಯನ್ನು ಮಾಡಲು ಸಾಕಾಗುವುದಿಲ್ಲ ಎಂಬ ಭಾವನೆ ನನಗಿದ್ದ ಕಾರಣ ಕರ್ನಾಟಕ ಸಂಗೀತ ಕಚೇರಿ ನಡೆಸುವ ಧೈರ್ಯ ಇರಲಿಲ್ಲ. ನಾನು ಇನ್ನೂ ಹೆಚ್ಚಿನದನ್ನು ಮಾಡಲು ಬಯಸಿದ್ದೆ, ಆದರೆ ಚಿತ್ರರಂಗದಲ್ಲಿ ಹಾಡುಗಳಲ್ಲಿ ಬ್ಯುಸಿಯಿದ್ದ ಕಾರಣ ಶಾಸ್ತ್ರೀಯ ಸಂಗೀತ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಗುರುವಿನೊಂದಿಗೆ ಕಲಿಯಲು ನನಗೆ ಸಮಯ ಸಿಗಲಿಲ್ಲ. ಅದು ಇನ್ನೂ ಬಾಕಿ ಇದೆ, ಅದನ್ನು ಮಾಡಬೇಕಾಗಿದೆ ಎನ್ನುತ್ತಾರೆ.
ಚಿತ್ರಾ ಅವರು ಒಂದು ಕಾಲದಲ್ಲಿ ಪ್ರತಿ ತಿಂಗಳು ಬೆಂಗಳೂರಿಗೆ ಭೇಟಿ ನೀಡಿ ಏಕಕಾಲದಲ್ಲಿ ಬಹು ಹಾಡುಗಳನ್ನು ರೆಕಾರ್ಡ್ ಮಾಡುತ್ತಿದ್ದ ಸಮಯವಿತ್ತು. ಈಗ ಬೆಂಗಳೂರಿಗೆ ಬಂದು ಹಾಡುಗಳ ರೆಕಾರ್ಡಿಂಗ್ ಕೆಲಸಗಳು ಕೆಲಸಗಳು ಕಡಿಮೆಯಾಗಿದ್ದರೂ, ಇತ್ತೀಚೆಗೆ ಆನ್‌ಲೈನ್‌ನಲ್ಲಿ ಅಥವಾ ತಮ್ಮ ಮನೆಗೆ ಹತ್ತಿರದಲ್ಲಿ ಮಾಡುತ್ತಿದ್ದರೂ ಬೆಂಗಳೂರು, ನಗರವು ಇನ್ನೂ ಚಿತ್ರಾ ಅವರ ಹೃದಯಕ್ಕೆ ಹತ್ತಿರವಾಗಿದೆ.
(ಕೆ.ಎಸ್. ಚಿತ್ರಾ ಅವರ ಸಂಗೀತ ಕಾರ್ಯಕ್ರಮ ಇಂದು ಸಂಜೆ 7 ಗಂಟೆಯಿಂದ ವೈಟ್‌ಫೀಲ್ಡ್‌ನ ಫೀನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಲೈವ್ ಇರಲಿದೆ. ಟಿಕೆಟ್‌ಗಳು bookmyshow.com ನಲ್ಲಿ ಲಭ್ಯವಿದೆ)