ಮುಂಬೈ: ಅಭಿಮಾನಿಗಳ ಸಾಕಷ್ಟು ನಿರೀಕ್ಷೆಗಳು ಮತ್ತು ಕುತೂಹಲಗಳ ನಡುವೆ ನಟ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ 'ಕಿಂಗ್‌ಡಮ್' ಚಿತ್ರವು ಗುರುವಾರ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.
ನಟನ ಅಭಿನಯದ ಬಗ್ಗೆ ಪ್ರೇಕ್ಷಕರಿಂದ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 'ಕಿಂಗ್‌ಡಮ್' ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ವಿಜಯ್ ದೇವರಕೊಂಡ ಅವರು ಚಿತ್ರಕ್ಕಾಗಿ ಮಾಡಿದ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
'ಈ ಕ್ಷಣ ನಿಮಗೆ (ವಿಜಯ್ ದೇವರಕೊಂಡ) ಮತ್ತು ನಿಮ್ಮನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಎಷ್ಟು ಮುಖ್ಯ ಎಂಬುದು ತನಗೆ ತಿಳಿದಿದೆ'. 'ಮನಂ ಕೊಟ್ಟಿನಂ' (ತೆಲುಗಿನಲ್ಲಿ ನಾವು ಗೆದ್ದಿದ್ದೇವೆ'ಎಂದರ್ಥ) #ಕಿಂಗ್‌ಡಮ್' ಎಂದು ಅವರು ಬರೆದಿದ್ದಾರೆ.
ನಟಿಯ ಸಂದೇಶಕ್ಕೆ ವಿಜಯ್ ದೇವರಕೊಂಡ ಅವರು ಪ್ರತಿಕ್ರಿಯಿಸಿದ್ದು, 'ಮನಂ ಕೊಟ್ಟಿನಂ' ಎಂದಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳಿದ್ದು, ಇಬ್ಬರು 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ವಿಜಯ್ ದೇವರಕೊಂಡ ಅವರ 'ಕಿಂಗ್‌ಡಮ್' ಟ್ರೇಲರ್ ರಿಲೀಸ್ ಆದಾಗ, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಟ್ರೇಲರ್ ಅನ್ನು ಹಂಚಿಕೊಂಡಿದ್ದ ನಟಿ, 'ನಾನು ಈಗ 31ನೇ ತಾರೀಖಿನ ವರೆಗೂ ಕಾಯಲು ಸಾಧ್ಯವಿಲ್ಲ! ನಾವು ಫೈರ್ ಅನ್ನು ನೋಡಬಹುದು. ವಿಜಯ್ ದೇವರಕೊಂಡ ನೀವು ಮೂವರು ಅದ್ಭುತ ಪ್ರತಿಭೆಗಳು!! ನೀವು ಒಟ್ಟಿಗೆ ಏನನ್ನು ಮಾಡಿದ್ದೀರಿ ಎಂದು ನೋಡಲು ನನಗೆ ತುಂಬಾ ಕುತೂಹಲವಿದೆ. @gowtam19 @anirudhofficial. ಜುಲೈ 31ಕ್ಕೆ ಕಿಂಗ್‌ಡಮ್ ವೀಕ್ಷಿಸಲು ಹೋಗೋಣ!!!!!!' ಎಂದು ಬರೆದಿದ್ದರು.
ಗೌತಮ್ ತಿನ್ನನೂರಿ ಬರೆದಿರುವ ಮತ್ತು ನಿರ್ದೇಶಿಸಿರುವ 'ಕಿಂಗ್‌ಡಮ್' ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದು, ಭಾಗ್ಯಶ್ರೀ ಬೋರ್ಸೆ ಮತ್ತು ಸತ್ಯದೇವ್ ನಟಿಸಿದ್ದಾರೆ. ಇದನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಅಡಿಯಲ್ಲಿ ಎಸ್ ನಾಗವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.