ಬೆಂಗಳೂರು: ಬೆಂಗಳೂರಿನ ಕೆಂಗೇರಿಯ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ನಟ ವಿಷ್ಣುವರ್ಧನ್ (Actor Vishnuvardhan) ರ ಸ್ಮಾರಕವನ್ನು ರಾತ್ರೋ ರಾತ್ರಿ ಕಿತ್ತೊಗೆಯಲಾಗಿದ್ದು, ಈ ವಿಚಾರ ಸ್ಯಾಂಡಲ್ ವುಡ್ ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕವನ್ನು ನೆಲಸಮ ಮಾಡಲಾಗಿದ್ದು, ರಾತ್ರೋರಾತ್ರಿ ಸಮಾಧಿಯನ್ನು ತೆರವುಗೊಳಿಸಲಾಗಿದೆ.
ಅಂದಹಾಗೆ ಅಭಿಮಾನ್ ಸ್ಟುಡಿಯೋದಲ್ಲಿ ಇರುವ ವಿಷ್ಣುವರ್ಧನ್ ಸಮಾಧಿ ಸ್ಥಳಕ್ಕೆ ಅಭಿಮಾನಿಗಳಿಗೆ ಪ್ರವೇಶ ಸಿಗುತ್ತಿಲ್ಲ. ಈಗಾಗಲೇ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಿದೆ. ಆದರೂ ಕೂಡ ಅಂತ್ಯಸಂಸ್ಕಾರ ನಡೆದ ಸ್ಥಳದ ಬಗ್ಗೆ ಅಭಿಮಾನಿಗಳಿಗೆ ಭಾವನಾತ್ಮಕ ನಂಟು ಇತ್ತು. ಆದರೆ ಈಗ ಸಮಾಧಿ ಸ್ಥಳವನ್ನು ನೆಲಸಮ ಮಾಡಲಾಗಿದೆ.
ಬಿಕ್ಕಿ ಬಿಕ್ಕಿ ಅತ್ತ ನಿರ್ದೇಶಕ ರವಿ ಶ್ರೀ ವತ್ಸ
ಇನ್ನು ಈ ಸ್ಮಾರಕವನ್ನು ತೆರವುಗೊಳಿಸಿರುವ ವಿಚಾರವನ್ನು ಖ್ಯಾತ ನಿರ್ದೇಶಕ ರವಿ ಶ್ರೀ ವತ್ಸ ಬಹಿರಂಗ ಮಾಡಿದ್ದು, ಈ ಸ್ಥಳಕ್ಕೆ ನಿರ್ದೇಶಕ ರವಿ ಶ್ರೀವತ್ಸ ಅವರು ಇಂದು (ಆಗಸ್ಟ್ 8) ಭೇಟಿ ನೀಡಿದ್ದಾರೆ. ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿದ್ದಕ್ಕಾಗಿ ರವಿ ಶ್ರೀವತ್ಸ (Ravi Srivatsa) ಅವರು ಕಣ್ಣೀರು ಹಾಕಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಅವರು ಅಭಿಮಾನಿಗಳಿಗೆ ತೀವ್ರ ನೋವಿನ ಸುದ್ದಿಯನ್ನು ತಿಳಿಸಿದ್ದಾರೆ.
‘ನಮ್ಮ ದೇವರ ಗುಡಿಯನ್ನು ಇಂದು ನೆಲಸಮ ಮಾಡಿದ್ದಾರೆ. ಇದು ನನ್ನ ಯಜಮಾನರು ಮಲಗಿದ್ದಂತಹ ಜಾಗ. ಅಲ್ಲೊಂದು ಪುಟ್ಟ ಗುಡಿ ಇತ್ತು. ಸಣ್ಣ ಗೋಪುರ ಇತ್ತು. ಆ ಗೋಪುರವನ್ನು ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ನಮ್ಮ ಯಜಮಾನರನ್ನು ನೋಡಲು ಬಂದರೆ ಗೇಟ್ ಕೂಡ ತೆಗೆಯುತ್ತಿಲ್ಲ. ಪೊಲೀಸರು ಸರ್ಪಗಾವಲು ಹಾಕಿಕೊಂಡು ಕೂತ್ತಿದ್ದಾರೆ’ ಎಂದು ರವಿ ಶ್ರೀವತ್ಸ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.
ಅಲ್ಲದೆ, 'ವಿಷ್ಣುವರ್ಧನ್ ಅವರ ಸಮಾಧಿಯನ್ನು ಕೂಡ ಕಾಪಾಡಿಕೊಳ್ಳಲು ಆಗದ ಮಟ್ಟಕ್ಕೆ ನಾವು ಬಂದಿದ್ದೇವೆ. ನೆಮ್ಮದಿಯಾಗಿ ಮಲಗಿದ್ದ ನಮ್ಮ ಯಜಮಾನನ ಜಾಗ ಈಗ ಬರೀ ಮಣ್ಣಾಗಿದೆ. ನನಗೆ ನೋವು ತಡೆಯಲು ಆಗುತ್ತಿಲ್ಲ. ಇವತ್ತು ನಾವು ನಿಜವಾಗಿಯೂ ನಮ್ಮ ಯಜಮಾನರನ್ನು ಕಳೆದುಕೊಂಡ್ವಿ. ಯಾರೂ ಇಲ್ಲದಂತೆ ಅನಾಥರನ್ನಾಗಿ ಮಾಡಿಬಿಟ್ಟರು.
ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ವಿಎಸ್ಎಸ್ನವರು ಎಲ್ಲಿದ್ದೀರಿ? ದೊಡ್ಡ ದೊಡ್ಡ ನಿರ್ಮಾಪಕರು ಎಲ್ಲಿ ಇದ್ದೀರಿ? ನಿರ್ದೇಶಕರು ಎಲ್ಲಿದ್ದೀರಿ? ಬನ್ನಿ ಸ್ವಾಮಿ, ನೆಲಸಮ ಆಗಿರುವ ನಮ್ಮ ಯಜಮಾನರನ್ನು ನೋಡಿ’ ಎಂದು ರವಿ ಶ್ರೀವತ್ಸ ಅವರು ಫೇಸ್ಬುಕ್ ಲೈವ್ ಬಂದಾಗಲೇ ಅವರನ್ನು ಪೊಲೀಸರು ತಡೆದಿದ್ದಾರೆ. ‘ನನ್ನನ್ನು ಹಿಡಿದು ಎಳೆಯುತ್ತಿದ್ದಾರೆ. ಇದು ಪೊಲೀಸ್ ದೌರ್ಜನ್ಯ’ ಎಂದು ಕಿಡಿಕಾರಿದ್ದಾರೆ.
ಕೆ.ಮಂಜು ಆಕ್ರೋಶ
ಮೊದಲಿನಿಂದಲೂ ಈ ಜಾಗದ ಬಗ್ಗೆ ವಿವಾದವಿತ್ತು. ನಾನು ಬಾಲಣ್ಣನ ಕುಟುಂಬಸ್ಥರೊಂದಿಗೆ ಮಾತನಾಡಿದ್ದೆ. ಆ ಜಾಗಕ್ಕೆ ಎಷ್ಟು ವೆಚ್ಚವಾಗುತ್ತದೆಯೋ ನಾನೇ ನೀಡಿ ಅದನ್ನು ಖರೀದಿಸುತ್ತೇನೆ ಎಂದೂ ಹೇಳಿದ್ದೆ. ಸರ್ಕಾರ ಮೈಸೂರಿನಲ್ಲಿ ಜಾಗ ಮಂಜೂರು ಮಾಡಿತು. ಇದಕ್ಕೆ ದಾದಾ ಕುಟುಂಬಸ್ಥರೂ ಕೂಡ ಒಪ್ಪಿಗೆ ನೀಡಿದರು.
ಆದರೆ ಅಭಿಮಾನಿಗಳು ಮಾತ್ರ ದಾದಾ ಅವರ ಅಂತ್ಯಕ್ರಿಯೆ ನಡೆದ ಜಾಗವನ್ನು ದೇಗುಲದಂತೆ ಕಾಣುತ್ತಿದ್ದರು. ಅಭಿಮಾನಿಗಳೂ ಕೂಡ ಆ ಜಾಗವನ್ನು ತಾವೇ ಖರೀದಿ ಮಾಡುವುದಾಗಿ ಹೇಳಿದ್ದರು. ಆದರೆ ಈ ಪ್ರಕರಣ ಕಾನೂನು ಚೌಕಟ್ಟಿನಲ್ಲಿರುವುದರಿಂದ ನಾವು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ಆದರೆ ನಮಗೊಂದು ಮಾತು ಹೇಳಿದ್ದರೆ ಪೂಜಾ ಕೈಂಕರ್ಯ ಮಾಡಿ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡುತ್ತಿದ್ದೆವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೆಯೇ ನಟ ಬಾಲಣ್ಣನ ಕುಟುಂಬಸ್ಥರ ವಿರುದ್ಧ ಪರೋಕ್ಷ ಕಿಡಿಕಾರಿದ ಕೆ ಮಂಜು, ಈ ಜಾಗವನ್ನು ಸರ್ಕಾರ ಬಾಲಣ್ಣನಿಗೆ ಸ್ಟುಡಿಯೋ ಕಟ್ಟಲು ನೀಡಿದ್ದರು. ಆದರೆ ಬಳಿಕ ಅವರ ಕುಟುಂಬಸ್ಥರು ವಾಣಿಜ್ಯ ಕಾರಣಗಳಿಗಾಗಿ ಸ್ವಲ್ಪ ಜಾಗವನ್ನು ಮಾರಿಕೊಂಡಿದ್ದಾರೆ. ನಿಯಮಗಳ ಪ್ರಕಾರ ಇದು ಸ್ಟುಡಿಯೋ ನಿರ್ಮಿಸಲು ಮಾತ್ರ ಬಳಕೆ ಮಾಡಬೇಕು ಎಂದರು.
ಅಲ್ಲದೆ ಇದು ಕಿಡಿಕೇಡಿಗಳ ಕೆಲಸವಲ್ಲ. ಅಭಿಮಾನಿಗಳು ಇದಕ್ಕೆ ಕಿವಿಗೊಡಬಾರದು. ಇದು ಈ ಜಾಗದ ಮಾಲೀಕರೇ ಮಾಡಿರುವ ಕೆಲಸ. ಇದು ಅಂತ್ಯ ಸಂಸ್ಕಾರ ಮಾಡಿರುವ ಜಾಗವಾದ್ದರಿಂದ ಮತ್ತೆ ಆ ಬಗ್ಗೆ ಬಾಲಣ್ಣನ ಕುಟುಂಬಸ್ಥರೊಂದಿಗೆ ಮಾತನಾಡುವ ಕೆಲಸ ಮಾಡುತ್ತೇವೆ ಎಂದು ಕೆ ಮಂಜು ಹೇಳಿದರು.