ಬೆಂಗಳೂರು: ಕನ್ನಡದ ಆ್ಯನಿಮೇಷನ್ ಸಿನಿಮಾ ಮಹಾವತಾರ ನರಸಿಂಹ (Mahavatar Narsimha) ಚಿತ್ರದ ಜಾಗತಿಕ ಬಾಕ್ಸ್ ಆಫಿಸ್ ಗಳಿಕೆ 200 ಕೋಟಿ ರೂ ದಾಟಿದ್ದು, ಹಿಂದಿ ಭಾಷೆಯಲ್ಲೇ ಚಿತ್ರದ ಗಳಿಕೆ 126 ಕೋಟಿ ರೂಗಳಷ್ಟಿದೆ.
ಹೌದು... ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ ನರಸಿಂಹ ಚಿತ್ರ ಸತತ 3ನೇ ವಾರದ ಯಶಸ್ವಿ ಪ್ರದರ್ಶನದ ಬಳಿಕ 4ನೇ ವಾರದತ್ತ ದಾಪುಗಾಲಿರಿಸಿದ್ದು, ಚಿತ್ರದ ಹಿಂದಿ ಅವತರಣಿಕೆಯ ಗಳಿಕೆ 126.76 ಕೋಟಿ ರೂ ಗೆ ಏರಿಕೆಯಾಗಿದೆ.
ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಚಿತ್ರ ತನ್ನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಬ್ಬರ ಆರ್ಭಟ ನಡೆಸುತ್ತಿದೆ.
ಈಗಾಗಲೇ ಚಿತ್ರ ನೂರು ಕೋಟಿ ಕ್ಲಬ್ ಸೇರಿ, ಹಿಂದಿಯಲ್ಲಿ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದ್ದು ಚಿತ್ರ 100 ಕೋಟಿ ರೂ ಗಡಿದಾಟಿ ಇದೀಗ ತನ್ನ ಗಳಿಕೆಯನ್ನು 126.76 ಕೋಟಿ ರೂ ಗೆ ಏರಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
200 ಕೋಟಿ ರೂ ದಾಟಿದ ಜಾಗತಿಕ ಗಳಿಕೆ
ಇನ್ನು ಚಿತ್ರದ ಜಾಗತಿಕ ಗಳಿಕೆ 200 ಕೋಟಿ ರೂ ಗಡಿ ದಾಟಿದ್ದು, ಈ ಬಗ್ಗೆ ಹೊಂಬಾಳೆ ಫಿಲಂಸ್ ಮಾಹಿತಿ ನೀಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಪ್ಯಾನ್ ಇಂಡಿಯಾ ತೆರೆಕಂಡಿದ್ದ ಮಹವಾತಾರ ನರಸಿಂಹ ಚಿತ್ರ ಜಗತ್ತಿನಾದ್ಯಂತ ಈ ವರೆಗೂ 210 ಕೋಟಿ ರೂ ಗಳಿಸಿದೆ ಎಂದು ಟ್ವೀಟ್ ಮಾಡಿದೆ.
'ಮಹಾವತಾರನರಸಿಂಹ ಚಿತ್ರ ಅದ್ಭುತ ಓಟವನ್ನು ಮುಂದುವರೆಸಿದ್ದು, ದಾಖಲೆಗಳನ್ನು ಪುಡಿಗಟ್ಟಿ ವಿಶ್ವಾದ್ಯಂತ ಲಕ್ಷಾಂತರ ಜನರ ಪ್ರೀತಿಯನ್ನು ಗೆದ್ದಿದೆ' ಎಂದು ಟ್ವೀಟ್ ಮಾಡಿದೆ.