ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡುತ್ತಿದ್ದಂತೆಯೇ ಇತ್ತ Devil ಚಿತ್ರದ ಹಾಡು ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಹೌದು.. ಕಳೆದೊಂದು ವಾರದಿಂದ ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಹಾಡಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗಾಯದ ಮೇಲೆ ಬರೆ ಬಿದ್ದಿದ್ದು ಅತ್ತ ಸುಪ್ರೀಂ ಕೋರ್ಟ್ ದರ್ಶನ್ ರ ಜಾಮೀನು ರದ್ದು ಮಾಡಿದೆ. ಅಂತೆಯೇ ಇತ್ತ ಡೆವಿಲ್ ಚಿತ್ರ ತಂಡ ಕೂಡ ತನ್ನ ಮೊದಲ ಹಾಡು ಬಿಡುಗಡೆಯನ್ನು ಮುಂದೂಡಿದೆ.
ದಿ ಡೆವಿಲ್’ (The Devil Movie) ಚಿತ್ರದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ (Idre Nemmadi Agi Irbeku) ಎಂಬ ಹಾಡನ್ನು ಚಿತ್ರತಂಡ ಆಗಸ್ಟ್ 15 ಅಂದರೆ ನಾಳೆ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಮಾಡಲು ಯೋಜಿಸಿತ್ತು. ಈ ಹಾಡು ಕೂಡ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಸಿತ್ತು.
ಆದರೆ ಹಾಡಿನ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ ನಟ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಅವರಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಇಂದು (ಆಗಸ್ಟ್ 14) ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಇದೇ ಕಾರಣದಿಂದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ.
ಅಂದಹಾಗೆ ‘ಮಿಲನ’ ಖ್ಯಾತಿಯ ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರೀ ಜೈಮಾತಾ ಕಂಬೈನ್ಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಆಗಸ್ಟ್ 15ರಂದು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ ಆಗಲಿದೆ ಎಂದು ಕೆಲವೇ ದಿನಗಳ ಹಿಂದಷ್ಟೇ ತಿಳಿಸಲಾಗಿತ್ತು. ಆದರೆ ಈಗ ಹಾಡು ಬಿಡುಗಡೆ ಮುಂದಕ್ಕೆ ಹೋಗಿದೆ ಎಂಬುದನ್ನು ಚಿತ್ರತಂಡವೇ ತಿಳಿಸಿದೆ.
ಈ ಕುರಿತು ಚಿತ್ರ ನಿರ್ಮಾಣ ಮಾಡುತ್ತಿರುವ ಶ್ರೀ ಜೈಮಾತಾ ಕಂಬೈನ್ಸ್ ಸಂಸ್ಥೆ ಟ್ವೀಟ್ ಮಾಡಿದ್ದು, 'ನಾಳೆ ಬಿಡುಗಡೆಯಾಗಬೇಕಿದ್ದ ಮೊದಲ ಹಾಡಿನ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ' ಎಂದು ತಿಳಿಸಿದೆ.
'ಡೆವಿಲ್' ಅಪ್ಡೇಟ್
‘ಕಾಟೇರ’ ಸಿನಿಮಾದ ಯಶಸ್ಸಿನ ಬಳಿಕ ‘ದಿ ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ದರ್ಶನ್ ತೊಡಗಿಕೊಂಡಿದ್ದರು. ರೇಣುಕಾಸ್ವಾಮಿ ಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಅರೆಸ್ಟ್ ಆದಾಗ ಚಿತ್ರದ ಶೂಟಿಂಗ್ ನಿಂತಿತು. ಕೆಲವು ತಿಂಗಳ ಬಳಿಕ ಅವರು ರೆಗ್ಯುಲರ್ ಬೇಲ್ ಪಡೆದು ಹೊರಗೆ ಬಂದರು. ಬಳಿಕ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡರು. ದರ್ಶನ್ ಅವರು ನ್ಯಾಯಾಲಯದಿಂದ ಅನುಮತಿ ಪಡೆದು ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ್ದರು. ತಮ್ಮ ಪಾಲಿನ ಚಿತ್ರೀಕರಣವನ್ನು ಅವರು ಮುಗಿಸಿಕೊಟ್ಟಿದ್ದಾರೆ. ಅಲ್ಲದೇ ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದಾರೆ.