ಬೆಂಗಳೂರು: ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಇತ್ತೀಚೆಗಷ್ಟೇ ಯುದ್ಧಕಾಂಡ 2 ಸಿನಿಮಾ ನಿರ್ಮಿಸಿ, ನಟಿಸಿದ್ದ ನಟ ಅಜಯ್ ರಾವ್ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದು, ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ನಟ, ಅದೆಲ್ಲ ಸುಳ್ಳು ಎಂದಿದ್ದರು.
ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವ್ಯಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಂತಿಸುತ್ತೇನೆ. ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ. ಅವುಗಳನ್ನು ಖಾಸಗಿಯಾಗಿ ಉಳಿಯುವಂತೆ ಸಹಕರಿಸಿ ಎಂದು ವಿನಂತಿಸಿದ್ದಾರೆ. ನಿಮ್ಮ ಮನವೊಲಿಕೆ, ಬೆಂಬಲ ಮತ್ತು ವಿವೇಕ ನಮಗೆ ಅತ್ಯಂತ ಮುಖ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಅಜೇಯ್ ರಾವ್ ಪೋಸ್ಟ್ ಮಾಡಿದ್ದಾರೆ.
ಅಜಯ್ ರಾವ್ ಹಾಗೂ ಸ್ವಪ್ನಾ ಪ್ರೀತಿಸಿ ಮದುವೆಯಾಗಿದ್ದರು. 2014ರಲ್ಲಿ ಹೊಸೇಪಟೆಯಲ್ಲಿ ಅವರ ವಿವಾಹ ನಡೆದಿತ್ತು. ದಂಪತಿಗೆ ಓರ್ವ ಮಗಳಿದ್ದು, 11 ವರ್ಷಗಳ ದಾಂಪತ್ಯ ಜೀವನಕ್ಕೆ ಇದೀಗ ಅಂತ್ಯ ಹಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ವಿಚ್ಛೇದನಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ನಟ ಅಜಯ್ ರಾವ್ ವಿರುದ್ಧ ಅವರ ಪತ್ನಿ ಸಪ್ನಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದು, ಮಗಳು ಕೂಡ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
2003ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ 'ಎಕ್ಸ್ಕ್ಯೂಸ್ ಮೀ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಜಯ್ ರಾವ್, 'ತಾಜ್ ಮಹಲ್', 'ಪ್ರೇಮ್ ಕಹಾನಿ', 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣ-ಲೀಲಾ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಇದೇ ವರ್ಷ ತೆರೆಕಂಡ ಯುದ್ಧಕಾಂಡ 2 ಸಿನಿಮಾವನ್ನು ನಿರ್ಮಿಸುವುದರ ಜೊತೆಗೆ ನಟಿಸಿದ್ದರು. ಆದರೆ, ಚಿತ್ರಕ್ಕೆ ಅಂದುಕೊಂಡಷ್ಟು ಯಶಸ್ಸು ಸಿಕ್ಕಿರಲಿಲ್ಲ. ಈ ಚಿತ್ರಕ್ಕೆ ಸಾಕಷ್ಟು ಹಣ ಸುರಿದಿದ್ದಾಗಿ ಸ್ವತಃ ಅಜಯ್ ರಾವ್ ಅವರೇ ಹೇಳಿದ್ದರು. ಅಲ್ಲದೆ, ತಮ್ಮಿಷ್ಟದ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡಿದ್ದ ಸುದ್ದಿ ವೈರಲ್ ಆಗಿತ್ತು.