ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇದೀಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಸೆಪ್ಟೆಂಬರ್ 3 ರಂದು ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಲಿದ್ದು, ಶಿವಣ್ಣ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಪವನ್ ಈ ಹಿಂದೆ ನಟ ಪುನೀತ್ ರಾಜ್‌ಕುಮಾರ್ ಜೊತೆಗೆ ಎರಡು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಬೆಂಗಳೂರಿನ ಬಳಿಕ ಮಂಡ್ಯ, ಹಿಮಾಚಲ ಪ್ರದೇಶ, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ.
ಈ ಚಿತ್ರಕ್ಕೆ ವೆಂಕಟ್ ನಾರಾಯಣ ಕೋಣಂಕಿ ನೇತೃತ್ವದ ಕೆವಿಎನ್ ಪ್ರೊಡಕ್ಷನ್ಸ್, ಒಡೆಯರ್ ಮೂವೀಸ್ ಸಹಯೋಗದೊಂದಿಗೆ ಬಂಡವಾಳ ಹೂಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಸದ್ಯ ಪ್ರೇಮ್ ನಿರ್ದೇಶನದ ಕೆಡಿ, ಜನ ನಾಯಗನ್ ಮತ್ತು ಪ್ರಿಯದರ್ಶನ್ ನಿರ್ದೇಶನದ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಹಿಂದಿ ಚಿತ್ರ, ನಿರ್ದೇಶಕ ಬಾಲನ್ ಅವರ ಮಲಯಾಳಂ ಚಿತ್ರ ಮತ್ತು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ತೆಲುಗು ಚಿತ್ರ ಸೇರಿದಂತೆ ಹಲವಾರು ಬಹುಭಾಷಾ ಚಿತ್ರಗಳನ್ನು ನಿರ್ಮಿಸುತ್ತಿದೆ.
ಚಿತ್ರದಲ್ಲಿ ಜಯರಾಮ್, ಸಾಯಿ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಪ್ರಕಾಶ್ ಬೆಳವಾಡಿಯಂತಹ ಹಿರಿಯ ನಟರು ನಟಿಸುತ್ತಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ.
ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರವು ಆ್ಯಕ್ಷನ್, ಡ್ರಾಮಾ ಮತ್ತು ಭಾವನೆಗಳಿಂದ ತುಂಬಿದ ಕಮರ್ಷಿಯಲ್ ಎಂಟರ್‌ಟೈನರ್ ಆಗಿ ಮೂಡಿಬರಲಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದರೆ, ಶಶಾಂಕ್ ನಾರಾಯಣ್ ಸಂಕಲನವನ್ನು ನಿರ್ವಹಿಸಲಿದ್ದಾರೆ.