ಕನ್ನಡ ಚಿತ್ರರಂಗವು ಪ್ರಸಿದ್ಧ ಕುಟುಂಬದಿಂದ ಬಂದ ಹೊಸ ಪ್ರತಿಭೆಯನ್ನು ಸ್ವಾಗತಿಸಲು ಸಜ್ಜಾಗಿದೆ. ನಟ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಅವರ ಮೊಮ್ಮಗ ಸಾಯಿನಂದ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ರಾಜೇಶ್ ಅವರ ಮೊಮ್ಮಗ ಸಾಯಿನಂದ್ ಅಭಿನಯದ ‘ಮುಜುಗರ’ ಚಿತ್ರವು ಇತ್ತೀಚೆಗೆ ಪ್ರಾರಂಭವಾಯಿತು, ಶಾಂತ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ತರುಣ್ ಎನ್ (ಜ್ಯೋತಿಪ್ರಿಯ) ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಪ್ರಮೋದ್ ಶೆಟ್ಟಿ ಆರಂಭ ಫಲಕ ತೋರಿದರು. ನಿರ್ಮಾಪಕಿ ಶಾಂತ ಶ್ರೀನಿವಾಸ್ ಕ್ಯಾಮೆರಾ ಚಾಲನೆ ಮಾಡಿದರು.
ನನ್ನ ತಾತ ರಾಜೇಶ್ ಯಾವಾಗಲೂ ನನಗೆ ಸ್ಫೂರ್ತಿ. ಅವರು ಇಂದು ಬದುಕಿದ್ದಿದ್ದರೇ ತುಂಬಾ ಹೆಮ್ಮೆಪಡುತ್ತಿದ್ದರು. ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಶಾಲೆಯಲ್ಲಿ ನಟನಾ ಕೋರ್ಸ್ ಪೂರ್ಣಗೊಳಿಸಿದ್ದೇನೆ, ನಾಯಕನಾಗಿ ಇದು ನನ್ನ ಮೊದಲ ಚಿತ್ರ. ಈ ಅವಕಾಶಕ್ಕಾಗಿ ನಿರ್ಮಾಪಕ ಮತ್ತು ನಿರ್ದೇಶಕರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಸಾಯಿ ನಂದ್ ಹೇಳಿದ್ದಾರೆ.
ನನಗೆ ಚಲನಚಿತ್ರೋದ್ಯಮದೊಂದಿಗೆ 20 ವರ್ಷಗಳ ಒಡನಾಟವಿದೆ, ನಾಗಾಭರಣ, ಅನಂತರಾಜು, ಅಮರ್ ಮತ್ತು 'ಕಾಂತಿ' ಭರತ್ ಅವರಂತಹ ದಿಗ್ಗಜರ ನಿರ್ದೇಶನದಲ್ಲಿ ಕೆಲಸ ಮಾಡಿದ್ದೇನೆ. ಮುಜುಗುರ ನನ್ನ ಮೊದಲ ಸ್ವತಂತ್ರ ನಿರ್ದೇಶನದ ಪ್ರಾಜೆಕ್ಟ್ ಆಗಿದೆ. ಈ ಕಥೆ ಕಾಫಿ ಎಸ್ಟೇಟ್ ಸುತ್ತ ನಡೆಯುವ ಪ್ರೇಮಕಥೆಯಾಗಿದೆ" ಎಂದು ನಿರ್ದೇಶಕ ತರುಣ್ ಎನ್ ತಿಳಿಸಿದ್ದಾರೆ.
ನಮ್ಮ ಸಂಸ್ಥೆಯು ಈ ಹಿಂದೆ 'ಎಲ್ಲಿ ಆಡೋದು ನಾವೆಲ್ಲಾ ಎಲ್ಲಿ ಆಡೋದು' ಎಂಬ ಮಕ್ಕಳ ಚಿತ್ರ ನಿರ್ಮಿಸಿತ್ತು, ಇದು ರಾಜ್ಯ ಪ್ರಶಸ್ತಿಯನ್ನು ಗೆದ್ದಿತು. ಇದು ನಮ್ಮ ಎರಡನೇ ಸಾಹಸ. ನಿರ್ದೇಶಕರು ಹೇಳಿದ ಕಥೆಯಿಂದ ನಾವು ಆಕರ್ಷಿತರಾಗಿ ಅದನ್ನು ಬೆಂಬಲಿಸಲು ನಿರ್ಧರಿಸಿದೆವು ಎಂದು ನಿರ್ಮಾಪಕಿ ಶಾಂತ ಶ್ರೀನಿವಾಸ್ ಹೇಳಿದರು.
ಸಾಯಿನಂದ್ ಗೆ ನಿಮಿಷ್ಕಾ ಮತ್ತು ತನು ನಾಯಕಿಯರಾಗಿ ನಟಿಸಿದ್ದಾರೆ. ಸುಭಾಷ್ ಎರಡನೇ ನಾಯಕ, ಮತ್ತು ಪ್ರಮೋದ್ ಶೆಟ್ಟಿ ಖಳನಾಯಕನಾಗಿ ನಟಿಸಿದ್ದಾರೆ. ಡಿಸೆಂಬರ್ 15 ರಂದು ಸಕಲೇಶಪುರ, ಚಿಕ್ಕಮಗಳೂರು, ಹೊರನಾಡು, ಕಳಸ, ಮಡಿಕೇರಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಜೈ ಆನಂದ್ ಛಾಯಾಗ್ರಾಹಕರಾಗದ್ದು , ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.