ಬೆಂಗಳೂರು: ಕಾಂತಾರಾ ಚಿತ್ರದ ಕುರಿತು ಅಪಹಾಸ್ಯ ಮಾಡಿದ್ದ ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ನಟಿ ದೀಪಿಕಾ ಪಡುಕೋಣೆ ಪತಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಹೌದು.. 'ಕಾಂತಾರ' ಚಿತ್ರದಲ್ಲಿ ಚಿತ್ರಿಸಲಾದ ಪವಿತ್ರ 'ದೈವ' (ಭೂತ ಕೋಲ) ಸಂಪ್ರದಾಯವನ್ನು ಅಪಹಾಸ್ಯ ಮಾಡುವ ಮತ್ತು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ರಣವೀರ್ ಸಿಂಗ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ನವೆಂಬರ್ 28 ರಂದು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ವೇದಿಕೆ ಮೇಲೆ ಭಾಷಣ ಮಾಡುವಾಗ ರಿಷಬ್ ಶೆಟ್ಟಿ ಅವರ ಉಳ್ಳಾಲ್ತಿ ದೈವದ ಅಭಿನಯವನ್ನು ಮರುಸೃಷ್ಟಿಸಿದ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರು ಮೂಲದ ವಕೀಲ ಪ್ರಶಾಂತ್ ಮೆಟಲ್ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವಕೀಲ ಪ್ರಶಾಂತ್ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
'ಕಾಂತಾರ' ಚಿತ್ರದಲ್ಲಿ ಚಿತ್ರಿಸಲಾದ ಪವಿತ್ರ 'ದೈವ' (ಭೂತ ಕೋಲ) ಸಂಪ್ರದಾಯವನ್ನು ಅಪಹಾಸ್ಯ ಮಾಡುವ ಮತ್ತು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಕೀಲ ಪ್ರಶಾಂತ್ ದೂರು ದಾಖಲಿಸಿದ್ದಾರೆ. ವಕೀಲ ಪ್ರಶಾಂತ್ ಮೆಥಲ್ ಸಲ್ಲಿಸಿದ ದೂರಿನಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ವರದಿಗಳು ಮತ್ತು ವೀಡಿಯೊ ದೃಶ್ಯಗಳನ್ನು ಉಲ್ಲೇಖಿಸಲಾಗಿದೆ.
ರಣವೀರ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸೆಕ್ಷನ್ 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 302 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಉದ್ದೇಶದಿಂದ ಪದಗಳನ್ನು ಉಚ್ಚರಿಸುವುದು), ಮತ್ತು 196 (ಧರ್ಮ, ಜನಾಂಗ, ಭಾಷೆ ಅಥವಾ ಜನ್ಮಸ್ಥಳದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ದೂರಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, 'ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಕಾನೂನುಬಾಹಿರ ಮತ್ತು ಆಕ್ರಮಣಕಾರಿ ಕ್ರಮಗಳು ನನ್ನ ಧಾರ್ಮಿಕ ಭಾವನೆಗಳನ್ನು ಮತ್ತು ಲಕ್ಷಾಂತರ ಹಿಂದೂಗಳ, ವಿಶೇಷವಾಗಿ ಕರ್ನಾಟಕದ ತುಳು ಮಾತನಾಡುವ ಸಮುದಾಯದ ಭಾವನೆಗಳನ್ನು ತೀವ್ರವಾಗಿ ನೋಯಿಸಿದ್ದಾರೆ' ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕ್ಷಮೆ ಕೇಳಿದ್ದ ರಣವೀರ್ ಸಿಂಗ್
ರಣವೀರ್ ಸಿಂಗ್ ವರ್ತನೆ ಮತ್ತು ನಡೆಯನ್ನು ಅನೇಕರು ಟೀಕಿಸಿದ್ದರು. ಸ್ವತಃ ರಿಷಬ್ ಶೆಟ್ಟಿ ಕೂಡ ಈ ರೀತಿ ಮಾಡ್ಬೇಡಿ ಅಂತಲೂ ಹೇಳಿದ್ದರು. ಆದರೂ ರಣವೀರ್ ಸಿಂಗ್ ಕೆಟ್ಟದಾಗಿಯೇ ಅನುಕರಣೆ ಮಾಡಿದ್ದರು. ದೈವವನ್ನ ದೆವ್ವ ಎಂದು ಹೇಳಿದ್ದರು. ಇದರಿಂದ ಅನೇಕರು ಬೇಸರ ಪಟ್ಟರು. ಟೀಕೆಗಳೂ ಜಾಸ್ತಿನೇ ಬಂದವು. ಆದರೆ, ಈ ಟೀಕೆಯ ನಂತರ ರಣವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ. ಅಂತೆಯೇ ರಿಷಬ್ ಶೆಟ್ಟಿ ಅವರ ಶ್ರಮವನ್ನ ಮೆಚ್ಚಿಕೊಂಡಿದ್ದೇನೆ. ಅದನ್ನೆ ಹೇಳುವ ಪ್ರಯತ್ನ ಮಾಡಿದ್ದೇನೆ. ಯಾವುದೇ ದೈವವನ್ನ, ಇಲ್ಲವೇ ಸಂಸ್ಕೃತಿಯನ್ನ ನಿಂದಿಸುವ ಉದ್ದೇಶ ಇರಲಿಲ್ಲ. ಆದರೂ ನನ್ನ ವರ್ತನೆಯಿಂದ ನಿಮಗೆ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ ಅಂತ ಬರೆದುಕೊಂಡಿದ್ದರು.