ಕನ್ನಡ ಭಕ್ತಿ ಸಂಗೀತ ಕ್ಷೇತ್ರದಲ್ಲಿ ಗೀತ ರಚನೆಕಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಶ್ರೇಯಸ್ ಎ.ಪಿ. ದುಗ್ಗರಾಜ್ ಇತ್ತೀಚೆಗೆ ಸಂಪೂರ್ಣ ಇಂಗ್ಲಿಷ್ ಭಾಷೆಯಲ್ಲಿ ರಚಿಸಲಾದ ಓಂ ನವ ನರಸಿಂಹ ಎಂಬ ವಿಶಿಷ್ಟ ಭಕ್ತಿಗೀತೆಯನ್ನು ಬಿಡುಗಡೆ ಮಾಡಿದ್ದಾರೆ.
ಪ್ರಾದೇಶಿಕ ಗಡಿಯನ್ನು ಮೀರಿ ಜಾಗತಿಕ ಕೇಳುಗರನ್ನು ತಲುಪುವ ಗುರಿಯೊಂದಿಗೆ ಹೊರತಂದಿರುವ ಈ ಗೀತೆಯು, ಸಂಗೀತ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಇಂಗ್ಲಿಷ್ ಭಕ್ತಿಗೀತೆಯೊಂದಿಗೆ ಜಾಗತಿಕ ಹೆಜ್ಜೆ
ವಿಷ್ಣುವಿನ ಪ್ರಮುಖ ಅವತಾರವಾದ ನರಸಿಂಹ ದೇವರ ಕುರಿತಾದ ಈ ಇಂಗ್ಲಿಷ್ ಭಕ್ತಿಗೀತೆಗೆ ದುಗ್ಗರಾಜ್ ಅವರೇ ಸಾಹಿತ್ಯ ರಚಿಸಿದ್ದಾರೆ. ದರ್ಶನ್ ನಾರಾಯಣ್ ಗಾಯನ ಮತ್ತು ಸ್ವಸ್ತಿಕ್ ಕಾರೇಕಾಡ್ ಸಂಗೀತ ನಿರ್ದೇಶನವಿರುವ ಈ ಹಾಡು, ಕನ್ನಡ ಸಾಹಿತ್ಯ ವಲಯದಲ್ಲಿ ಒಂದು ಅಪರೂಪದ ಪ್ರಯತ್ನವೆಂದು ಪರಿಗಣಿಸಲಾಗಿದೆ.
ಇಂಗ್ಲಿಷ್‌ನಲ್ಲಿ ಭಕ್ತಿಗೀತೆಯನ್ನು ರಚಿಸುವ ಮೂಲಕ, ಶ್ರೇಯಸ್ ಅವರು ತಮ್ಮ ಸಾಹಿತ್ಯದ ವ್ಯಾಪ್ತಿಯನ್ನು ಪ್ರಾದೇಶಿಕ ಗಡಿಗಳನ್ನು ಮೀರಿ ವಿಸ್ತರಿಸಿದ್ದು, ಹೊಸ ತಲೆಮಾರಿನ ಜಾಗತಿಕ ಕೇಳುಗರಿಗೂ ದೈವಿಕ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಈ ಹಾಡನ್ನು ಮಲ್ಲಿಕಾ ಕ್ಯಾಸೆಟ್ಸ್ ನಿರ್ಮಿಸಿದ್ದು, ಜೀವನ್ ಅವರು ನಿರ್ದೇಶನವನ್ನು ಮಾಡಿದ್ದಾರೆ.
ಶ್ರೇಯಸ್ ಅವರು ಈ ಹಿಂದೆ ಶ್ರೀ ವಿದ್ಯಾ ಗಣಪತಿ ಮತ್ತು ದುರ್ಗೆ ದುರ್ಗೆ ನವದುರ್ಗೆ ಎಂಬ ಭಕ್ತಿಗೀತೆಗಳಿಗೆ ಸಹ ಇಂಗ್ಲಿಷ್ ಸಾಹಿತ್ಯ ಬರೆದಿದ್ದರು.