ಕಿಚ್ಚ ಸುದೀಪ್ ನಟನೆಯ ಮುಂಬರುವ ಚಿತ್ರ ಮಾರ್ಕ್‌ನ 'ಮಸ್ತ್ ಮಲೈಕಾ' ಎಂಬ ರೋಮಾಂಚಕ ಪಾರ್ಟಿ ಟ್ರ್ಯಾಕ್‌ಗೆ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಧ್ವನಿ ನೀಡಿದ್ದಾರೆ. ಸರೆಗಮಾ ಸೌತ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಈ ಹಾಡು, ಅದರ ಮಾಸ್ ಶೈಲಿಯ ಬೀಟ್ಸ್ ಮತ್ತು ನಕಾಶ್ ಅಜೀಜ್ ಮತ್ತು ಸಾನ್ವಿ ಅವರ ಧ್ವನಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಡಿಗೆ ಶೋಭಿ ಪೌಲ್‌ರಾಜ್ ನೃತ್ಯ ಸಂಯೋಜನೆ ಇದ್ದು, ನಟ ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ನಟ ನಾನಿ ಅಭಿನಯದ 'ಹಿಟ್ 3' ಚಿತ್ರದ ಮೂಲಕ ಸಾನ್ವಿ ಸುದೀಪ್ ತೆಲುಗು ಚಿತ್ರರಂಗಕ್ಕೆ ಕೂಡ ಪದಾರ್ಪಣೆ ಮಾಡಿದ್ದಾರೆ. ಹಿಟ್ 3 ರ ಥೀಮ್ ಸಾಂಗ್ 'ಪೊರಟಮೆ 3.0' ಗೆ ಸಾನ್ವಿ ಧ್ವನಿ ನೀಡಿದ್ದಾರೆ. ಇದೀಗ ತನ್ನ ತಂದೆ ನಟಿಸಿರುವ ಚಿತ್ರದ ಮೂಲಕವೇ ಸಾನ್ವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.
'ನನ್ನ ಪ್ರೀತಿಯ ಬಾದ್‌ಶಾಹರೇ... ಸಾನ್ವಿಯ ಮೊದಲ ಹಾಡನ್ನು ಪ್ರಸ್ತುತಪಡಿಸುತ್ತಿರುವುದು ನನಗೆ ಸಂತೋಷವಾಗುತ್ತಿದೆ. ಇದು ನಿಮ್ಮೆಲ್ಲರಿಗೂ ನಮ್ಮ ಆರಂಭಿಕ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಉಡುಗೊರೆ. ಪ್ರೀತಿ, ಶಕ್ತಿ ಮತ್ತು ಶುದ್ಧ ಆಚರಣೆಯಿಂದ ಮಾಡಿದ ಈ ವಿಡಿಯೋವನ್ನು ಆನಂದಿಸಿ' ಎಂದು ಕಿಚ್ಚ ಸುದೀಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು.
ಚಿತ್ರವು ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ಮಾರ್ಕ್‌ನಲ್ಲಿ ಶೈನ್ ಟಾಮ್ ಚಾಕೊ, ನವೀನ್ ಚಂದ್ರ, ವಿಕ್ರಾಂತ್, ಯೋಗಿ ಬಾಬು, ಗುರು ಸೋಮಸುಂದರಂ, ನಿಶ್ವಿಕಾ ನಾಯ್ಡು, ರೋಶನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ದೀಪಶಿಖಾ, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ಮಹಾಂತೇಶ್ ಹಿರೇಮಠ್ ಸಹ ನಟಿಸಿದ್ದಾರೆ.
ಸತ್ಯ ಜ್ಯೋತಿ ಫಿಲ್ಮ್ಸ್ & ಕಿಚ್ಚಾ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಿಸಲಾದ ಮಾರ್ಕ್ ಅನ್ನು ವಿಜಯ್ ಕಾರ್ತಿಕೇಯ ಬರೆದು ನಿರ್ದೇಶಿಸಿದ್ದಾರೆ. ಹಾಡಿಗೆ ಶೇಖರ್ ಚಂದ್ರ ಅವರ ಛಾಯಾಗ್ರಹಣ, ಎಸ್.ಆರ್. ಗಣೇಶ್ ಬಾಬು ಅವರ ಸಂಕಲನವಿದೆ. ಸ್ಟಂಟ್ ಸಿಲ್ವಾ, ಸುಪ್ರೀಂ ಸುಂದರ್, ರವಿ ವರ್ಮಾ, ಕೆವಿನ್ ಕುಮಾರ್, ವಿಕ್ರಮ್ ಮೋರ್ ಮತ್ತು ಸುಬ್ರಮಣಿ ಆ್ಯಕ್ಷನ್ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ. ನಿರ್ಮಾಣ ವಿನ್ಯಾಸವನ್ನು ಶಿವಕುಮಾರ್ ಜೆ, ಮತ್ತು ಚಿತ್ರವು ಭರತ್ ಸಾಗರ್ ಅವರ ಕಾಸ್ಟ್ಯೂಮ್ಸ್ ಮತ್ತು ಆರ್. ಹರಿಹರ ಸುತನ್ ಅವರ VFX ಅನ್ನು ಹೊಂದಿದೆ.