ಹೈದರಾಬಾದ್: 'ದಿ ರಾಜಾ ಸಾಬ್' ಚಿತ್ರದ 'ಸಹನಾ ಸಹನಾ' ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಅವರು ಅತೀವ ಮುಜುಗರ ಹಾಗೂ ಆತಂಕ ಎದುರಿಸಿದ ಘಟನೆ ನಡೆದಿದೆ.
ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ದಿ ರಾಜಾ ಸಾಬ್’ (The Raja Saab) ಚಿತ್ರದ ‘ಸಹನಾ ಸಹನಾ’ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಈ ಘಟನೆ ಸಂಭವಿಸಿದ್ದು, ಸದ್ಯ ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.
ಹೈದರಾಬಾದ್‌ನ ಲೂಲೂ ಮಾಲ್‌ನಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ನಟಿ ನಿಧಿ ಅಗರ್ವಾಲ್ ಹಾಗೂ ನಿರ್ದೇಶಕ ಮಾರುತಿ ಆಗಮಿಸಿದ್ದರು.
ಕಾರ್ಯಕ್ರಮ ಮುಗಿಸಿ ನಿಧಿ ಅವರು ಹೊರ ಬರುವಾಗ ಸ್ಥಳದಲ್ಲಿದ್ದ ನೂರಾರು ಅಭಿಮಾನಿಗಳು ಮತ್ತು ಜನರು ಏಕಾಏಕಿ ಅವರನ್ನು ಸುತ್ತುವರೆದಿದ್ದಾರೆ. ಸೆಲ್ಫಿ ಹಾಗೂ ಹತ್ತಿರದಿಂದ ನೋಡುವ ಹಪಾಹಪಿಯಿಂದ ಜನರು ನಟಿಯ ಮೇಲೆ ಮುಗಿಬಿದ್ದಿದ್ದಾರೆ. ಇದರಿಂದಾಗಿ ಅವರು ಸರಿಯಾಗಿ ನಡೆಯಲು ಸಾಧ್ಯವಾಗದೆ, ಗುಂಪಿನ ಮಧ್ಯೆ ಸಿಲುಕಿ ಅಕ್ಷರಶಃ ನಲುಗಿದ್ದಾರೆ.
ಈ ನಡುವೆ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸೂಕ್ಷ್ಮತೆ ಅರಿತ ಬೌನ್ಸರ್‌ಗಳು ಹರಸಾಹಸ ಪಟ್ಟು ನಿಧಿ ಅವರನ್ನು ಗುಂಪಿನಿಂದ ಹೊರತಂದು ಕಾರಿನವರೆಗೆ ಕರೆದೊಯ್ದಿದ್ದಾರೆ. ಕಾರು ಹತ್ತಿದ ನಂತರ ನಿಧಿ ಅವರು ದೀರ್ಘವಾಗಿ ನಿಟ್ಟುಸಿರು ಬಿಟ್ಟಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಬಳಿಕ ನಟಿ ತಮ್ಮ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಾ ನಿಟ್ಟುಸಿರು ಬಿಟ್ಟು, ಅಸಮಾಧಾನದಿಂದಲೇ ಅಲ್ಲಿಂದ ನಿರ್ಗಮಿಸಿದ್ದಾರೆ.
ಘಟನೆಯ ಕುರಿತು ಗಾಯಕಿ ಚಿನ್ಮಯಿ ಶ್ರೀಪಾದ ಪ್ರತಿಕ್ರಿಯಿಸಿದ್ದು, “ಹೈನಾ ಪ್ರಾಣಿಗಳಿಗಿಂತ ಕಡೆಯಾಗಿ ವರ್ತಿಸುವ ಇಂತಹ ಜನರನ್ನು ಬೇರೆ ಗ್ರಹಕ್ಕೆ ಹಾಕಬೇಕು ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಚಿತ್ರತಂಡ ಹಾಗೂ ಮಾಲ್‌ನ ವ್ಯವಸ್ಥಾಪಕರ ವಿರುದ್ಧ ಹರಿಹಾಯ್ದಿದ್ದಾರೆ.
ಇಂತಹ ದೊಡ್ಡ ಬಜೆಟ್ ಸಿನಿಮಾದ ಕಾರ್ಯಕ್ರಮ ಮಾಡುವಾಗ ಸರಿಯಾದ ಭದ್ರತೆ ಏಕೆ ಒದಗಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕವಾಗಿ ಮಹಿಳಾ ನಟಿಯರಿಗೆ ಸೂಕ್ತ ಗೌರವ ಮತ್ತು ವೈಯಕ್ತಿಕ ಸ್ಥಳಾವಕಾಶ ನೀಡದ ಜನರ ವರ್ತನೆಯನ್ನು ಹಲವರು ಖಂಡಿಸಿದ್ದಾರೆ.