ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ಮಾರ್ಕ್' ಸಿನಿಮಾ ಇದೇ 25 ರಂದು ಬಿಡುಗಡೆಗೆ ಸಜ್ಜಾಗಿರುವಂತೆಯೇ ಇದರ 'ಪ್ರೀ ರಿಲೀಸ್ ' ಕಾರ್ಯಕ್ರಮದಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಅಭಿಮಾನಿಗಳ ನಡುವೆ ವಾರ್ ಗೆ ಕಾರಣವಾಗಿದೆ.
ನಾವು ಸಿನಿಮಾ ಬಿಡುಗಡೆ ಮಾಡುವ ಜೊತೆಗೆ ಯುದ್ಧವೊಂದನ್ನು ಸಹ ಮಾಡಬೇಕಿದೆ. ಹೊರಗೆ ಪಡೆಯೊಂದು ಯುದ್ಧಕ್ಕೆ ರೆಡಿ ಆಗುತ್ತಿದೆ. ನಾನು ಮಾತನಾಡಬಾರದು ಎಂದು ಸುಮ್ಮನಿದ್ದೆ, ಮಾತನಾಡಲು ಬರುವುದಿಲ್ಲ ಎಂದರ್ಥವಲ್ಲ, ಆದರೆ ಕೆರಳಿಸುತ್ತಾ ಹೋದರೆ ಸುಮ್ಮನೆ ಕೂರಲು ಆಗುವುದಿಲ್ಲ ಎಂದು ಸುದೀಪ್ ಹೇಳಿದ್ದಾರೆ.
ಇನ್ನೂ ಸುದೀಪ್ ಮಾತಿಗೆ ಟಾಂಗ್ ಕೊಟ್ಟಂತೆ ಮಾತನಾಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಕೆಲವರು ದರ್ಶನ್ ಅವ್ರು ಇಲ್ಲದೇ ಇದ್ದಾಗ ಏನೇನೋ ಮಾತಾಡ್ತಾ ಇದ್ದಾರೆ. ಅವರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆ ಎಲ್ಲಾ ಮಾತಾಡ್ತಾರೆ. ವೇದಿಕೆ ಮೇಲೆ ನಿತ್ಕೊಂಡು ಮಾತಾಡೋದು. ವೀಡಿಯಾಗಳಲ್ಲಿ ಕುಳಿತು ಮಾತಾಡೋದು. ಹೊರಗೆ ಕುತ್ಕೊಂಡ್ ಮಾತಾಡೋದು ಎಲ್ಲಾ ಮಾಡ್ತಿದ್ದಾರೆ. ಅದೇ ಜನರು ದರ್ಶನ್ ಅವರು ಇದ್ದಾಗ ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ ಅಂತ ಹೇಳಿದ್ದರು.
ಇವರ ಮಾತಿಗೆ ತಿರುಗೇಟು ನೀಡಿರುವ ಕಿಚ್ಚನ ಅಭಿಮಾನಿಗಳು, 2011ರ ಹಳೆಯ ಫೋಟೋವನ್ನ ವೈರಲ್ ಮಾಡಿದ್ದಾರೆ. ಅಂದು ನಿಮ್ಮ ಮೇಲೆ ಹಲ್ಲೆಯಾಗಿ, ದರ್ಶನ್ ಮೇಲೆ ಕೇಸ್ ಬಿದ್ದು, ನಿಮ್ಮ ಸಂಸಾರ ಬೀದಿಗೆ ಬೀಳುವ ಸ್ಥಿತಿಯಲ್ಲಿತ್ತು. ಆಗ ನಿಮಗೆ ಬೆಂಬಲವಾಗಿ ನಿಂತಿದ್ದು ಇದೇ ಕಿಚ್ಚ ಸುದೀಪ್ ಅನ್ನೋದನ್ನ ಮರೀಬೇಡಿ. ಕಷ್ಟದಲ್ಲಿ ಸುದೀಪ್ ಬೇಕು, ಈಗ ಟಾಂಗ್ ಕೊಡ್ತೀರಾ ಅಂತ ಪ್ರಶ್ನೆ ಮಾಡ್ತಿದ್ದಾರೆ. ಅಂದು ನೀವು ಅಳುತ್ತಾ ನಿಂತಾಗ ಕಣ್ಣೀರು ಒರೆಸಿದ್ದು ಯಾರು ಅನ್ನೋದನ್ನ ಒಮ್ಮೆ ನೆನಪು ಮಾಡಿಕೊಳ್ಳಿ ಮೇಡಂ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಅಂದು ಸುದೀಪ್ ಅವರ ಪೈಲ್ವಾನ್ ಸಿನಿಮಾ ರಿಲೀಸ್ ಆದಾಗ ಅದನ್ನ ಬೇಕಂತಲೇ ಟಾರ್ಗೆಟ್ ಮಾಡಿದ್ರು. ಸಿನಿಮಾ ಥಿಯೇಟರ್‌ಗೆ ಬರುವ ಮುನ್ನವೇ ಪೈರಸಿ ಮಾಡಿ ಟೆಲಿಗ್ರಾಂನಲ್ಲಿ ಹರಿಬಿಟ್ಟಿದ್ರು. ಅಂದು ಸುದೀಪ್ ಕಣ್ಣೀರು ಹಾಕಿದ್ರು, ನೊಂದುಕೊಂಡಿದ್ರು. ಆಗೆಲ್ಲಾ ಸಂಭ್ರಮ ಪಟ್ಟವರು ಈಗ್ಯಾಕೆ ಸುದೀಪ್ ಅವರ ಹೇಳಿಕೆಗೆ ಉರಿಗೊಳ್ತಿದ್ದೀರಾ ಅಂತ ಕಿಚ್ಚನ ಬಳಗ ನೇರವಾಗಿಯೇ ಪ್ರಶ್ನೆ ಮಾಡುತ್ತಿದ್ದಾರೆ.
ಕರ್ಮ ತಿರುಗಿ ನೋಡುತ್ತೆ ಅನ್ನೋದು ಇದೇನಾ ಅಂತಿದ್ದಾರೆ. ವಿಪರ್ಯಾಸ ಅಂದ್ರೆ ಈಗ ದರ್ಶನ್ ಅವರ ಡೆವಿಲ್ ಸಿನಿಮಾವನ್ನ ಕೂಡ ಕಿಡಿಗೇಡಿಗಳು ಪೈರಸಿ ಮಾಡಿ ಟೆಲಿಗ್ರಾಂನಲ್ಲಿ ಬಿಟ್ಟಿದ್ದಾರೆ. ಆದ್ರೆ ಇದಕ್ಕೆ ಸುದೀಪ್ ಸಂಭ್ರಮ ಪಟ್ಟಿಲ್ಲ. ಬದಲಿಗೆ ಪೈರಸಿ ಮಾಡೋ ಪಡೆಯ ವಿರುದ್ಧ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಲಾವಿದರ ಶ್ರಮಕ್ಕೆ ಬೆಲೆ ಕೊಡಿ ಅಂತ ಹೇಳಿದ್ದಾರೆ. ಅಂದು ನೀವು ಮಾಡಿದ್ದನ್ನ, ಇಂದು ನಮ್ಮ ಬಾಸ್ ಮಾಡ್ತಿಲ್ಲ. ಇದೇ ಸುದೀಪ್ ಮತ್ತು ಉಳಿದವರ ನಡುವಿನ ವ್ಯತ್ಯಾಸ ಅಂತ ಫ್ಯಾನ್ಸ್ ಹೇಳ್ತಿದ್ದಾರೆ.
ಸುದೀಪ್ ಅವರಿಗೆ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತಾಡಬೇಕು ಅನ್ನೋ ಉದ್ದೇಶ ಇದ್ದಿದ್ರೆ, ಅದಕ್ಕೆ ಎಷ್ಟೋ ಅವಕಾಶಗಳು ಇದ್ವು. ಎಷ್ಟೋ ಇಂಟರ್ವ್ಯೂಗಳಲ್ಲಿ ಅವರು ದರ್ಶನ್ ಬಗ್ಗೆ ಕೇಳಿದ್ರೂ ನಯವಾಗಿಯೇ ಉತ್ತರ ಕೊಟ್ಟಿದ್ದಾರೆ. ಯಾವತ್ತೂ ಯಾರ ಬಗ್ಗೆಯೂ ಕೀಳಾಗಿ ಮಾತಾಡಿಲ್ಲ. ಆದ್ರೆ ಈಗ 'ಯುದ್ಧ'ದ ಮಾತು ಆಡಿದ ತಕ್ಷಣ ಅದನ್ನ ದರ್ಶನ್ ಅವರಿಗೇ ಹೇಳಿದ್ದು ಅಂತ ನೀವಾಗಿಯೇ ನಿರ್ಧಾರ ಮಾಡಿಕೊಳ್ಳೋದು ಎಷ್ಟು ಸರಿ ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ.