ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ 'ದಿ ರಾಜಾ ಸಾಬ್' ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮ ಮುಗಿಸಿಕೊಂಡು ಹಿಂತಿರುಗುತ್ತಿದ್ದ ವೇಳೆ ನಟಿ ನಿಧಿ ಅಗರ್ವಾಲ್ ಸುತ್ತ ನೂರಾರು ಅಭಿಮಾನಿಗಳು ಸುತ್ತುವರೆದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಇದೀಗ ಭಾನುವಾರವೂ ಅಂತಹದ್ದೇ ಘಟನೆ ವರದಿಯಾಗಿದ್ದು, ಜುಬಿಲಿ ಹಿಲ್ಸ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನಸಂದಣಿಯಿಂದ ಹೊರಬರಲು ನಟಿ ಸಮಂತಾ ರುತ್ ಪ್ರಭು ಹೆಣಗಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಸಿರಿಮಲ್ಲೆ ಸೀರೆಗಳ ಉದ್ಘಾಟನೆಗಾಗಿ ಸಮಂತಾ ಜುಬಿಲಿ ಹಿಲ್ಸ್‌ಗೆ ಬಂದಿದ್ದರು. ಅವರ ಉಪಸ್ಥಿತಿಯ ಕುರಿತು ಸುದ್ದಿ ಹರಡುತ್ತಿದ್ದಂತೆ, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ವೀಕ್ಷಕರ ಬೃಹತ್ ಗುಂಪು ಆ ಸ್ಥಳದ ಹೊರಗೆ ಜಮಾಯಿಸಿದೆ.
ಕಾರ್ಯಕ್ರಮ ಮುಗಿದ ನಂತರ ನಟಿ ತಮ್ಮ ವಾಹನದ ಬಳಿಗೆ ಹೋಗಲು ಮುಂದಾದಾಗ ಏಕಾಏಕಿ ಸಾರ್ವಜನಿಕರು ಅವರನ್ನು ಸುತ್ತುವರಿದಿದ್ದಾರೆ. ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ಉಪಸ್ಥಿತಿಯ ಹೊರತಾಗಿಯೂ, ಜನಸಮೂಹ ಬ್ಯಾರಿಕೇಡ್ ಅನ್ನು ದಾಟಿ ಒಳನುಗ್ಗಿದೆ. ಹಲವಾರು ವ್ಯಕ್ತಿಗಳು ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಮತ್ತು ಅವರು ನಡೆಯುತ್ತಿರುವಾಗ ಅವರನ್ನು ತಳ್ಳುತ್ತಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ಅಂತಿಮವಾಗಿ ಅವರನ್ನು ರಕ್ಷಿಸುತ್ತಾ ಕಾರಿಗೆ ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯು ಡಿಸೆಂಬರ್ 17 ರಂದು ಲುಲು ಮಾಲ್‌ನಲ್ಲಿ ನಿಧಿ ಅಗರ್ವಾಲ್ ಎದುರಿಸಿದ ಅದೇ ಪರಿಸ್ಥಿತಿಯಂತೆ ಕಂಡುಬಂದಿದೆ.
ಸೂಕ್ತ ಅನುಮತಿ ಪಡೆಯದಿರುವುದು ಮತ್ತು ಅಸಮರ್ಪಕ ಭದ್ರತೆ ಒದಗಿಸಿದ್ದಕ್ಕಾಗಿ ಹೈದರಾಬಾದ್ ಪೊಲೀಸರು ಲುಲು ಮಾಲ್ ಆಡಳಿತ ಮಂಡಳಿ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಸತತವಾಗಿ ನಡೆಯುತ್ತಿರುವ ಇಂತಹ ಘಟನೆಗಳು ದೇಶದಲ್ಲಿ 'ಅಭಿಮಾನಿಗಳ ಮಿತಿ' ಮತ್ತು ಸೆಲೆಬ್ರಿಟಿಗಳ ಆರಾಧನೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿವೆ.