ಪೃಥ್ವಿ ಅಂಬರ್ ಹಾಗೂ ಪ್ರಮೋದ್ ಮುಖ್ಯಭೂಮಿಕೆಯಲ್ಲಿರುವ “ಭುವನಂ ಗಗನಂ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಗರದ ಜಿಟಿ ಮಾಲ್ ನಲ್ಲಿ ಭಾನುವಾರ ನಡೆಯಿತು.
ಈ ವೇಳೆ ಚಿತ್ರದ ತಂಡಕ್ಕೆ ನಟರಾದ ಡಾರ್ಲಿಂಗ್ ಕೃಷ್ಣ, ನೀನಾಸಂ ಸತೀಶ್, ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ತ್ರಿವಿಕ್ರಮ್, ಅನುಷಾ ರೈ, ಹಾಸ್ಯನಟ ಶಿವರಾಜ್ ಕೆ ಆರ್ ಪೇಟೆ, ನಿರ್ದೇಶಕ ಚೇತನ್ ಕುಮಾರ್, ನಟಿಯರಾದ ಪವನ ಗೌಡ, ಸಾನ್ಯಾ ಅಯ್ಯರ್, ಸಂಭಾಷಣೆ ಬರಹಗಾರ ಮಾಸ್ತಿ ಮತ್ತು ಇತರರು ಸೇರಿದಂತೆ ಹಲವು ಪ್ರಮುಖರು ಸಾಥ್ ನೀಡಿದ್ದರು.
ಎರಡು ಮುಗ್ದ ಮನಸ್ಸುಗಳ ಪಯಣದ ಭುವನಂ ಗಗನಂ ಚಿತ್ರವಾಗಿದೆ. ಗಿರೀಶ್ ಮೂಲಿಮನಿ ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡ್ಕೊಂಡು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಕನ್ನಡ ಸಿನಿಮಾ ರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡಬೇಕೆಂಬ ಕನಸಿನೊಂದಿಗೆ ನಿರ್ಮಾಪಕ ಎಂ ಮುನೇಗೌಡ ತಮ್ಮದೇ ಎಸ್ ವಿಸಿ ಫಿಲ್ಮಂಸ್ ಪ್ರೊಡಕ್ಷನ್ ನಡಿ ಭುವನಂ ಗಗನಂ ಚಿತ್ರಕ್ಕೆ ಹಣ ಹಾಕಿದ್ದಾರೆ.
ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ.
ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್, ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ, ಗಿರೀಶ್ ಮೂಲಿಮನಿ, ಪ್ರಸನ್ನ ವಿ ಸಂಭಾಷಣೆ ಸಿನಿಮಾಕ್ಕಿದೆ.
ಈ ನಡುವೆ ಭುವನಂ ಗಗನಂ ಸಿನಿಮಾದ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚೆಗೆ ಚಿತ್ರತಂಡ ದುಬೈನಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ದುಬೈ ಕನ್ನಡಿಗರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಮಿಗಳ ದಿನದಂದು ಭುವನಂ ಗಗನಂ ಸಿನಿಮಾದ ಕನ್ನಡ ಸಿನಿಮಾ ಪ್ರೇಮಿಗಳ ಎದುರು ಬರಲಿದೆ.