ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿನಯದ ಆಕ್ಷನ್-ಪ್ಯಾಕ್ಡ್ ಕನ್ನಡ ಚಿತ್ರ ಮ್ಯಾಕ್ಸ್ ಶೀಘ್ರದಲ್ಲೇ ಕಿರುತೆರೆ ಮತ್ತು ಒಟಿಟಿ ಪ್ಲಾಟ್ ಫಾರ್ಮ್ ಗೆ ಲಗ್ಗೆ ಇಡುತ್ತಿದ್ದು, ಸುದೀಪ್ ಅಭಿಮಾನಿಗಳಿಗೆ ಮತ್ತೆ ರಸದೌತಣ ನೀಡಲಿದೆ.
ಡಿಸೆಂಬರ್ 25ರ ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ 'ಮ್ಯಾಕ್ಸ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಚಿತ್ರ ಬಿಡುಗಡೆಯಾಗಿ ಬಹುತೇಕ 2 ತಿಂಗಳುಗಳೇ ಕಳೆದರೂ ಚಿತ್ರಮಂದಿರಗಳಲ್ಲಿ ಮ್ಯಾಕ್ಸ್ ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿರಲಿಲ್ಲ.
ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿಯೂ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾದ ಒಟಿಟಿ ಮತ್ತು ಕಿರುತೆರೆ ಪ್ರಸಾರದ ಬಗ್ಗೆ ಅಪ್‌ಡೇಟ್ ಸಿಕ್ಕಿದೆ.
ಎಲ್ಲಿ ಬಿಡುಗಡೆ?
ಈಗಾಗಲೇ ಜೀ5 ಸಂಸ್ಥೆ ಮ್ಯಾಕ್ಸ್ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಸ್ಯಾಟಲೈಟ್ ಹಕ್ಕುಗಳನ್ನೂ ಸಹ ಜೀ ಕನ್ನಡ ಪಡೆದುಕೊಂಡಿದೆ. ಅದರಂತೆ ಜೀ 5ನಲ್ಲಿ ಮ್ಯಾಕ್ಸ್ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಜೀ5 ಮ್ಯಾಕ್ಸ್ ಚಿತ್ರವನ್ನು ಸ್ಟ್ರೀಮಿಂಗ್ ಮಾಡಲು ಸಜ್ಜಾಗುತ್ತಿದೆ. ಈಗಾಗಲೇ ಜೀ 5ಕನ್ನಡ ಈ ಬಗ್ಗೆ ಅಧಿಕೃತ ಪೋಸ್ಟ್ ಕೂಡ ಮಾಡಿದ್ದು, ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಈ ಕುರಿತ ಜಾಹಿರಾತಿಗಳನ್ನು ಕೂಡ ಪ್ರಸಾರ ಮಾಡುತ್ತಿದೆ.
ಯಾವಾಗ ಕಿರುತೆರೆ ಮತ್ತು ಒಟಿಟಿಗೆ?
ಮ್ಯಾಕ್ಸ್ ಚಿತ್ರ ಸದ್ಯ ಥಿಯೇಟ್ರಿಕಲ್ ಓಟ ಮುಗಿಸಿದ್ದು, ಇದೀಗ ಒಟಿಟಿಯತ್ತ ಮುಖಮಾಡಿದೆ. ಚಿತ್ರತಂಡ ಘೋಷಣೆ ಮಾಡಿರುವಂತೆ ಇದೇ ಫೆಬ್ರವರಿ 15ರಂದು ಚಿತ್ರ ಓಟಿಟಿ ಮತ್ತು ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಪೋಸ್ಟ್ ಮಾಡಿರುವ ಜೀ ಕನ್ನಡ, '"ಕೆಲವೊಂದ್ಸಲ ಯುದ್ಧ ಯಾರಿಂದ, ಯಾಕೆ ಶುರುವಾಯ್ತು ಅಂತ ಗೊತ್ತಿಲ್ದೆ ಶುರುವಾಗುತ್ತೆ.." ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ World Television Premiere 'ಮ್ಯಾಕ್ಸ್' | ಇದೇ ಶನಿವಾರ ರಾತ್ರಿ 7:30ಕ್ಕೆ. ಎಂದು ಟ್ವೀಟ್ ಮಾಡಿದೆ.