ಕನ್ನಡ ಚಿತ್ರರಂಗವು ಯಾವಾಗಲೂ ತಾಜಾ, ಪ್ರಯೋಗಾತ್ಮಕ ಚಿತ್ರಗಳಿಗೆ ವೇದಿಕೆ ಒದಗಿಸುತ್ತದೆ. ಇದೀಗ '1990’s' ಚಿತ್ರವು ಕೂಡ ಅಂತದ್ದೇ ಕಥೆಯನ್ನು ಹೊತ್ತು ತಂದಿದೆ. ಚಿತ್ರವನ್ನು ಮನಸ್ಸು ಮಲ್ಲಿಗೆ ಕಂಬೈನ್ಸ್ ನಿರ್ಮಾಣ ಮಾಡಿದ್ದು, ನಂದಕುಮಾರ್ ಸಿಎಂ ನಿರ್ದೇಶನವಿದೆ. 90 ರ ದಶಕದಲ್ಲಿ ನಡೆಯುವ ಲವ್ ಸ್ಟೋರಿ ಇದಾಗಿದೆ. ಅರುಣ್ ಮತ್ತು ರಾಣಿ ವಾರದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಡಾ. ನಾ ಸೋಮೇಶ್ವರ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಡಾ. ನಾ ಸೋಮೇಶ್ವರ್, ಚಿತ್ರದ ಸಂಗೀತ ಮತ್ತು ದೃಶ್ಯಗಳನ್ನು ಶ್ಲಾಘಿಸಿದರು. ಚಿತ್ರದ ಯಶಸ್ಸಿಗೆ ಶುಭ ಹಾರೈಸಿದರು. ಆದಾಗ್ಯೂ, ಇಂದ್ರಜಿತ್ ಲಂಕೇಶ್ ಅವರು, ಕೈಗೆಟುಕುವ ದರದಲ್ಲಿ ಟಿಕೆಟ್ ಮತ್ತು ಕೆಲವು ಥಿಯೇಟರ್‌ಗಳಲ್ಲಿ ಸುಧಾರಿತ ಸೌಲಭ್ಯಗಳ ಅಗತ್ಯತೆಯನ್ನು ಒತ್ತಿ ಹೇಳಿದರು. 'ಟ್ರೇಲರ್ ಅದ್ಭುತವಾಗಿ ಕಾಣುತ್ತದೆ ಮತ್ತು ಚಿತ್ರವು ಅಷ್ಟೇ ಪ್ರಭಾವಶಾಲಿಯಾಗಲಿದೆ ಎಂದು ನನಗೆ ಖಾತ್ರಿಯಿದೆ' ಎಂದರು.
ನಿರ್ದೇಶಕ ನಂದಕುಮಾರ್ ಸಿಎಂ ಮಾತನಾಡಿ, 'ಶೀರ್ಷಿಕೆ ಸೂಚಿಸುವಂತೆ 90ರ ದಶಕದಲ್ಲಿ ನಡೆಯುವ ಪ್ರೇಮಕಥೆಯನ್ನು ಚಿತ್ರ ಹೇಳುತ್ತದೆ. ಆದರೆ, ಸಾಂಪ್ರದಾಯಿಕ ಪ್ರೇಮಕಥೆಯನ್ನು ಮೀರಿದ್ದಾಗಿದೆ. ಇದು ಎಲ್ಲಾ ವಯಸ್ಸಿನ ವೀಕ್ಷಕರನ್ನು ಸೆಳೆಯುವ ಎಲ್ಲ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಚಿತ್ರಕ್ಕೆ ಸಿಗುತ್ತಿರುವ ಗಣ್ಯರ ಬೆಂಬಲಕ್ಕೆ ನಿರ್ಮಾಪಕ ಅರುಣ್ ಕುಮಾರ್ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ನಾಯಕ ಅರುಣ್ ಮತ್ತು ರಾಣಿ ವಾರದ್ ಕೂಡ ಕೃತಜ್ಞತೆ ತಿಳಿಸಿದರು. ಫೆಬ್ರುವರಿ 28ರಂದು ಚಿತ್ರವು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.