ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದು ನಿರಾಳವಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಂತೋಷ, ಸಡಗರದಿಂದ ಹುಟ್ಟುಹಬ್ಬ ಆಚರಿಸಿದ್ದಾರೆ.
ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು ಕಾಮನ್ ಡಿಸ್ ಪ್ಲೇ ಚಿತ್ರವನ್ನು (CDP) ಬಿಡುಗಡೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಿರುವ ವಿಜಯಲಕ್ಷ್ಮಿ, Celebrating the one and only D Boss! ಎಂದು ಬರೆದುಕೊಂಡಿದ್ದಾರೆ.
ಸಿಡಿಪಿಯಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿರುವ ದರ್ಶನ್ ಅವರ ದೊಡ್ಡ ಕಟೌಟ್ ಎದುರು ಅಭಿಮಾನಿಗಳು ಸಂಭ್ರಮಿಸುತ್ತಿರುವಂತೆ ಚಿತ್ರಿಸಲಾಗಿದೆ. HAPPY BIrthday D Boss ಎಂದು ಶುಭ ಕೋರಿದ್ದಾರೆ. ಈ ಸಿಡಿಪಿಯನ್ನು ದರ್ಶನ್ ಅವರ ಅಪಾರ ಅಭಿಮಾನಿಗಳು ವಿವಿಧ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ ಜೈಲು ಸೇರಿದ್ದ ಅವರ ಆಪ್ತ ಗೆಳತಿ ಪವಿತ್ರ ಗೌಡ, ಇನ್ಸಾಟಾಗ್ರಾಮ್ ನಲ್ಲಿ ತನ್ನ ಅಮ್ಮನ ಫೋಟೋವನ್ನು ಹಂಚಿಕೊಂಡಿದ್ದು, ಅವರೇ ನನ್ನ ದೊಡ್ಡ ಶಕ್ತಿ ಎಂದಿದ್ದಾರೆ. ದರ್ಶನ್ ಅವರಿಗೆ ಶುಭಾಶಯ ಕೋರುವಂತಹ ಯಾವುದೇ ಫೋಸ್ಟ್ ಹಾಕಿಲ್ಲ. ಇದು ದರ್ಶನ್ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಅನಾರೋಗ್ಯದ ಕಾರಣ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಇತ್ತೀಚಿಗೆ ವಿಡಿಯೋ ಸಂದೇಶದಲ್ಲಿ ದರ್ಶನ್ ಅಭಿಮಾನಿಗಳಿಗೆ ತಿಳಿಸಿದ್ದರು.
ಈ ನಡುವೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ನಿರ್ದೇಶಿಸಿದ್ದಾರೆ.