ಕೊಚ್ಚಿ: ಕೇರಳಿಗರಿಂದ 'ಭಾವಗಾಯಕ' ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ, ಕನ್ನಡದ ‘ಒಲವಿನ ಉಡುಗೊರೆ ಕೊಡಲೇನು’ ಖ್ಯಾತಿಯ ಮಲಯಾಳಂ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಿ.ಜಯಚಂದ್ರನ್ ಅವರು ತ್ರಿಶೂರ್ ಜಿಲ್ಲೆಯ ಅಮಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
"ಬುಧವಾರ, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಆದರೆ ಇಂದು ಸಂಜೆ ಅವರ ಮನೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಂಜೆ 7.54ಕ್ಕೆ ಅವರು ಕೊನೆಯುಸಿರೆಳೆದರು" ಎಂದು ಅಮಲ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
ಮಾರ್ಚ್ 3, 1944 ರಂದು ಕೊಚ್ಚಿಯಲ್ಲಿ ರವಿವರ್ಮ ಕೊಚಾನಿಯನ್ ತಂಪುರನ್ ಮತ್ತು ಪಲಿಯತ್ ಸುಬ್ರಕುಂಜಮ್ಮ ದಂಪತಿಗೆ ಜನಿಸಿದ ಜಯಚಂದ್ರನ್ ಅವರು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 16,000 ಕ್ಕೂ ಹೆಚ್ಚು ಹಾಡುಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದರು.
ಅತ್ಯುತ್ತಮ ಹಿನ್ನೆಲೆ ಗಾಯಕನಿಗೆ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಕೇರಳ ಸರ್ಕಾರದಿಂದ ಜೆ.ಸಿ. ಡೇನಿಯಲ್ ಪ್ರಶಸ್ತಿ ಮತ್ತು ಕೇರಳ ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಜೊತೆಗೆ ನಾಲ್ಕು ತಮಿಳುನಾಡು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಜಯಚಂದ್ರನ್ ಅವರು ಪತ್ನಿ ಲಲಿತಾ, ಮಗಳು ಲಕ್ಷ್ಮಿ ಮತ್ತು ಮಗ ದೀನನಾಥನ್ ಅವರನ್ನು ಅಗಲಿದ್ದಾರೆ.
ಜಯಚಂದ್ರನ್ ಅವರು ಕನ್ನಡದಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಬರೀಷ್ ಅಭಿನಯದ ಒಲವಿನ ಉಡುಗೊರೆ ಸಿನಿಮಾದ 'ಒಲವಿನ ಉಡುಗೊರೆ ಕೊಡಲೇನು..', ಅಮೃತ ಘಳಿಗೆ ಸಿನಿಮಾದ 'ಹಿಂದೂಸ್ತಾನವು ಎಂದೂ ಮರೆಯದ..', ರಂಗನಾಯಕಿ ಸಿನಿಮಾದ 'ಮಂದಾರ ಪುಷ್ಪವು ನೀನು..', ಮಾನಸ ಸರೋವರದ 'ಚಂದ..ಚಂದ..', ಹಂತಕನ ಸಂಚು ಸಿನಿಮಾದ 'ಜೀವನ ಸಂಜೀವನ..'. ಭಕ್ತ ಪ್ರಹ್ಲಾದ ಸಿನಿಮಾದ 'ಕಮಲ ನಯನ.. ಕಮಲ ವದನ..' ಪ್ರಾಯ ಪ್ರಾಯ ಪ್ರಾಯ ಸಿನಿಮಾದ 'ಭೂಮಿ ತಾಯಾಣೆ, ನೀ ಇಷ್ಟ ಕಣೆ..' ಹಾಗೂ ಮಸಣದ ಹೂವು ಚಿತ್ರದ 'ಕನ್ನಡ ನಾಡಿನ ಕರಾವಳಿ..' ಯಂಥ ಸುಪ್ರಸಿದ್ದ ಗೀತೆಗಳಿಗೆ ಅವರು ದನಿಯಾಗಿದ್ದರು.