ಕಿರಿಕ್ ಪಾರ್ಟಿ ಸಿನಿಮಾ ಹಿಟ್ ಆದಾಗ ಕನ್ನಡಿಗರು ಪ್ರೀತಿಯಿಂದ ನಮ್ಮ ಕೊಡವ ಕನ್ನಡತಿ ಎಂದು ಸ್ವೀಕರಿಸಿದ್ದರು. 2017ರಲ್ಲಿ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದ ಮೇಲೆ ತೆಲುಗು ಇಂಡಸ್ಟ್ರಿಗೆ ಹೋದ ಮೇಲೆ ಅಲ್ಲಿ ಹಿಟ್ ಚಿತ್ರಗಳನ್ನು ನೀಡುತ್ತಾ ಕನ್ನಡ ಬಗ್ಗೆ ನೀಡಿದ ಕೆಲವು ಹೇಳಿಕೆಗಳಿಂದ ವಿವಾದ ಮೈಮೇಲೆ ಎಳೆದುಕೊಂಡರು.
ಇಂದು ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ನಟಿಯರಲ್ಲಿ ಅತಿ ಹೆಟ್ಟು ಸಂಭಾವನೆ ಪಡೆಯುವ ಮಟ್ಟಿಗೆ ಬೆಳೆದಿದ್ದಾರೆ. ತೆಲುಗು, ತಮಿಳು, ಬಾಲಿವುಡ್ ನಲ್ಲಿ ನಟಿಸಿದ ಅನೇಕ ಚಿತ್ರಗಳು ಗೆದ್ದಿವೆ. ನ್ಯಾಶನಲ್ ಕ್ರಶ್ ಎಂದು ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕರೆಯುತ್ತಾರೆ.
ಕಳೆದ ವಾರ ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರ ಜೊತೆ ಸಂದರ್ಶನದಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ ನೀಡಿರುವ ಹೇಳಿಕೆ ವಿವಾದ ಎಬ್ಬಿಸಿದೆ. ಮತ್ತೆ ಕನ್ನಡಿಗರನ್ನು ಕೆರಳಿಸಿದೆ.
ಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ , ಬಹುಶಃ ನಾನೇ ಫಸ್ಟ್ ಅನ್ನಿಸುತ್ತೆ ಸಿನಿಮಾ ಇಂಡಸ್ಟ್ರಿಗೆ ನಟಿಯಾಗಿ ಬಂದಿರೋದು ಎಂದು ಹೇಳಿದ್ದಾರೆ. ಈ ವೇಳೆ ಸಂದರ್ಶಕಿ ನೀವೇ ಮೊದಲು ಎಂದು ಜನ ನಿರ್ಧರಿಸಿದ್ದಾರಾ ಎಂದು ಕೇಳಿದಾಗ, ಖಂಡಿತ ಕೊಡವ ಸಮುದಾಯದವರು ಇದನ್ನು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಡವ ಸಮುದಾಯದಿಂದ ಸಾಕಷ್ಟು ನಾಯಕಿಯರು ಚಿತ್ರರಂಗಕ್ಕೆ ಬಂದಿದ್ದು, ಖ್ಯಾತಿಯನ್ನು ಗಳಿಸಿದ್ದಾರೆ. ನಟಿ ಪ್ರೇಮ, ನಿಧಿ ಸುಬ್ಬಯ್ಯಾ, ಹರ್ಷಿಕ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿ ಹಲವರು ಬಂದಿದ್ದು, ಹೆಸರು ಮಾಡಿದ್ದಾರೆ. ಇವರೆಲ್ಲರಿಗೂ ಮುನ್ನ ನಟಿ ಪ್ರೇಮ ಹಲವು ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.