ರಾಜ್ ಬಿ ಶೆಟ್ಟಿ - ಸು ಫ್ರಮ್ ಸೋ ಚಿತ್ರದ ಸ್ಟಿಲ್ - ಜೆಪಿ ತುಮಿನಾಡ್ 
ಸಿನಿಮಾ ಸುದ್ದಿ

ಜನ ನಮ್ಮ ಕಪಾಳಕ್ಕೆ ಹೊಡೆದಂತಾಯಿತು; 'ಸು ಫ್ರಂ ಸೋ' ಪಾರ್ಟ್ 2 ಮಾಡುವುದು ನಮ್ಮ ನೈತಿಕತೆಗೆ ವಿರುದ್ಧ: ರಾಜ್ ಬಿ ಶೆಟ್ಟಿ

ಯುವ ರಾಜ್‌ಕುಮಾರ್ ನಟನೆಯ ಎಕ್ಕ ಮತ್ತು ಕಿರೀಟಿ ರೆಡ್ಡಿ ಅಭಿನಯದ ಜೂನಿಯರ್ ಚಿತ್ರ ಬಿಡುಗಡೆಯೊಂದಿಗೆ ತೆರೆಕಂಡ ಸು ಫ್ರಮ್ ಸೋ ಚಿತ್ರವು ಯಾವುದೇ ಸ್ಟಾರ್ ನಟರಿಲ್ಲದೆಯೇ ಭರ್ಜರಿ ಯಶಸ್ಸು ಕಂಡು ಮುನ್ನುಗ್ಗುತ್ತಿದೆ.

ರಾಜ್ ಬಿ ಶೆಟ್ಟಿ ನಿರ್ಮಿಸಿರುವ, ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸದ್ದಿಲ್ಲದೆ ಬಿಡುಗಡೆಯಾದ ಈ ಚಿತ್ರವು ಕರ್ನಾಟಕದಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ಸಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಯಶಸ್ಸು ಸಿಕ್ಕಂತಾಗಿದೆ. ದಿನದಿಂದ ದಿನಕ್ಕೆ ಪ್ರದರ್ಶನಗಳು ಹೆಚ್ಚಾಗುತ್ತಿದ್ದು, ಇಂದಿಗೂ ಟಿಕೆಟ್ ಸಿಗದೆ ಜನರು ಪರದಾಡುವಂತಾಗಿದೆ.

ಯುವ ರಾಜ್‌ಕುಮಾರ್ ನಟನೆಯ ಎಕ್ಕ ಮತ್ತು ಕಿರೀಟಿ ರೆಡ್ಡಿ ಅಭಿನಯದ ಜೂನಿಯರ್ ಚಿತ್ರ ಬಿಡುಗಡೆಯೊಂದಿಗೆ ತೆರೆಕಂಡ ಸು ಫ್ರಮ್ ಸೋ ಚಿತ್ರವು ಯಾವುದೇ ಸ್ಟಾರ್ ನಟರಿಲ್ಲದೆಯೇ ಭರ್ಜರಿ ಯಶಸ್ಸು ಕಂಡು ಮುನ್ನುಗ್ಗುತ್ತಿದೆ. ದಕ್ಷಿಣ ಭಾರತದ ಇತರ ಭಾಷೆಗಳಿಂದಲೂ ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿದೆ.

ಚಿತ್ರದ ನಿರ್ಮಾಪಕ ಮತ್ತು ನಟನಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ ಬಿ ಶೆಟ್ಟಿ, 'ಜನರು ನಮಗೆ ಕಪಾಳಮೋಕ್ಷ ಮಾಡಿ ಎಚ್ಚರಗೊಳಿಸಿದಂತೆ ಭಾಸವಾಯಿತು. ಅವರು, ನಮಗೆ ಒಳ್ಳೆಯ ಸಿನಿಮಾ ಕೊಡಿ, ನಾವು ಚಿತ್ರಮಂದಿರಗಳಿಗೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಅದೇ ನಮಗೆ ಸ್ಪಷ್ಟವಾಗಿ ಬಂದ ಸಂದೇಶ' ಎಂದರು.

'ಕಾಂತಾರ ಅಥವಾ ಕೆಜಿಎಫ್ ರೀತಿಯಲ್ಲಿ ಚಿತ್ರಗಳನ್ನು ಮಾಡಿದಾಗ ಯಶಸ್ಸು ಕಾಣಲು ಸಾಧ್ಯ ಎಂಬ ಭ್ರಮೆ ಇತ್ತು. ಆದರೆ, ಸು ಫ್ರಮ್ ಸೋ ವೈಯಕ್ತಿಕ ಮತ್ತು ಸರಳವಾಗಿದೆ. ಅದು ಪ್ರೇಕ್ಷಕರಲ್ಲಿಯೂ ಅದೇ ರೀತಿ ಪ್ರತಿಧ್ವನಿಸುತ್ತಿದೆ. ಆರಂಭದಲ್ಲಿ ಸರಿಯಾಗಿ ಶೋಗಳು ಸಿಗದಿದ್ದರೂ, ಚಿತ್ರವು ಉತ್ತಮ ಪ್ರದರ್ಶನ ಕಂಡಿದೆ. ಮುಂದಿನ ವಾರದಿಂದ, ನಮಗೆ ಹೆಚ್ಚಿನ ಶೋಗಳು ಸಿಗಬಹುದು' ಎಂದು ಹೇಳಿದರು.

ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಜುಲೈ 25 ರಂದು ಚಿತ್ರ ಬಿಡುಗಡೆ ಮಾಡುವುದು ಬೇಡ ಎಂಬ ಸಲಹೆಯನ್ನು ನೆನಪಿಸಿಕೊಂಡ ರಾಜ್ ಬಿ ಶೆಟ್ಟಿ, 'ಕೆಲವರು ಚಿತ್ರ ಬಿಡುಗಡೆಯನ್ನು ಮುಂದೂಡಲು ಸೂಚಿಸಿದರು. ಆದರೆ, ಈ ಚಿತ್ರ ಅಸ್ತಿತ್ವದಲ್ಲಿದೆ ಎಂದು ಪ್ರೇಕ್ಷಕರಿಗೆ ಹೇಳಲು ನಾನು ಆ ವಾರವನ್ನು ಜಾಹೀರಾತು ಪ್ರಚಾರದಂತೆ ಪರಿಗಣಿಸಿದೆ. ಮೊದಲನೇ ದಿನ ಜನರಿಂದ ಜನರಿಗೆ ಬಾಯಿ ಮಾತು ಮ್ಯಾಜಿಕ್ ಮಾಡಿತು. ಈ ಮಟ್ಟದ ಪ್ರತಿಕ್ರಿಯೆಯನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾವು ಉತ್ತಮ ಸ್ಥಳದಲ್ಲಿದ್ದೇವೆ ಮತ್ತು ಹೌದು, ನಾವು ಟಿಕೆಟ್ ಮಾರಾಟದ ದಾಖಲೆಗಳನ್ನು ಮುರಿದಿದ್ದೇವೆ' ಎಂದರು.

Su From So 2 ಚಿತ್ರದ ಬಗ್ಗೆ ಕೇಳಿದಾಗ, 'ಈ ಚಿತ್ರವು ಯಶಸ್ಸು ಕಂಡ ನಂತರ ಪಾರ್ಟ್ 2 ಮಾಡುವುದು ನಮ್ಮ ನೈತಿಕತೆಗೆ ವಿರುದ್ಧವಾಗಿದೆ. ಯಾರೋ ಒಬ್ಬರು Su From So 2 ಮಾಡುವ ಬಗ್ಗೆ ಸೂಚಿಸಿದರು. ಆ ಮಾತನ್ನು ಕೇಳಿದ ತಕ್ಷಣ ನಾನು 'ಇಲ್ಲ' ಅಂತ ಹೇಳಿದೆ. ಇದು ನಾವು ಬೆಂಬಲಿಸುವ ನೀತಿಗೆ ವಿರುದ್ಧವಾಗುತ್ತದೆ. ನಾವು ಯಶಸ್ಸಿನ ಬೆನ್ನಟ್ಟಲು ಇಲ್ಲಿಗೆ ಬಂದಿಲ್ಲ. ಪ್ರತಿ ಬಾರಿಯೂ ನಾವು ಏನಾದರೂ ಹೊಸ ಚಿತ್ರವನ್ನು ಮಾಡಲು ಬಯಸುತ್ತೇವೆ' ಎಂದು ತಿಳಿಸಿದರು.

'ಮುಂದಿನ ದಿನಗಳಲ್ಲಿ ತಂಡವು ಸ್ಥಿರವಾಗಿ ಮುಂದುವರಿಯಲಿದೆ. ನಾವು ಆತುರಪಡಬಾರದು. ಯೋಚಿಸೋಣ ಮತ್ತು ನಂತರ ಮುಂದೇನು ಎಂದು ನಿರ್ಧರಿಸೋಣ. ನಾನು ಮತ್ತೆ ಹೊಸ ಪ್ರತಿಭೆಗಳನ್ನು ಪೋಷಿಸಲು ಬಯಸುತ್ತೇನೆ. ಅದುವೇ ನನ್ನ ಸಂತೋಷ. ಜೆಪಿ ತುಮಿನಾಡ್ ಒಬ್ಬ ಅದ್ಭುತ ಪ್ರತಿಭೆ. ಅವರು ತಮ್ಮ ಹಾದಿಯನ್ನು ತಿಳಿದಿದ್ದಾರೆ. ಗುರುವಿನಂತೆಯೇ ನಿರ್ದೇಶನ ಮಾಡಬಲ್ಲ ಇತರರು ನಮ್ಮ ತಂಡದಲ್ಲಿದ್ದಾರೆ. ನಾನು ಬೆಂಬಲಿಸಲು ಬಯಸುವ ಉತ್ತಮ ಪ್ರತಿಭೆಗಳ ಗುಂಪಿದೆ' ಎಂದರು.

'ಬುಕ್‌ಮೈಶೋನಲ್ಲಿ ಆರೆಂಜ್ ಅಲರ್ಟ್ ಅನ್ನು ನಾನು ಆನಂದಿಸುತ್ತಿದ್ದೇನೆ': ಜೆಪಿ ತುಮಿನಾಡ್

ಈ ಚಿತ್ರದ ಮೂಲಕ ರಾತ್ರೋರಾತ್ರಿ ತೀವ್ರ ಸಂಚಲನ ಮೂಡಿಸಿದ ನಿರ್ದೇಶಕ ಜೆಪಿ ತುಮಿನಾಡ್, 'ನಾನು ಇದನ್ನು ಪ್ರಾಮಾಣಿಕವಾಗಿ ನಿರೀಕ್ಷಿಸಿರಲಿಲ್ಲ. ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿಲ್ಲ. ನಮ್ಮ ಏಕೈಕ ಗುರಿ ಮನರಂಜನೆಯಾಗಿತ್ತು. ಪ್ರೇಕ್ಷಕರಿಂದ ಈ ರೀತಿಯ ಪ್ರೀತಿ, ಅದು ಅಗಾಧವಾಗಿದೆ' ಎಂದು ಭಾವುಕರಾದರು.

ತುಮಿನಾಡ್ ಈ ಕ್ಷಣವನ್ನು, ವಿಶೇಷವಾಗಿ ಆನ್‌ಲೈನ್‌ನಲ್ಲಿ ಸಿನಿಮಾ ಬಗೆಗಿನ ಸುದ್ದಿಯನ್ನು ಆನಂದಿಸುತ್ತಿದ್ದಾರೆ. 'ನಾನು ಬುಕ್‌ಮೈಶೋ ನೋಡುವುದನ್ನು ಆನಂದಿಸುತ್ತಿದ್ದೇನೆ. ಅಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಹತ್ತಿರದಿಂದ ಕೇಳಿದಾಗ ಮೂಕವಿಸ್ಮಿತವಾದಂತೆ ಭಾಸವಾಗುತ್ತದೆ. ಇದು ಈಗಷ್ಟೇ ಪ್ರಾರಂಭವಾಗಿದೆ. ನಾನು ಇದರ ಪ್ರತಿಯೊಂದು ಅಂಶವನ್ನು ಇಷ್ಟಪಡುತ್ತೇನೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: 31 ಮಂದಿ ಸಾವು

ಉಸಿರಾಟದ ಸಮಸ್ಯೆಯಿಂದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

ಇಂದು ನಾಡಿನಾದ್ಯಂತ ಆಯುಧಪೂಜೆ, ಮಹಾನವಮಿ ಸಂಭ್ರಮ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

SCROLL FOR NEXT