ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿರುವುದರ ಮಧ್ಯೆ ಇತ್ತ ದರ್ಶನ್ ಫ್ಯಾನ್ಸ್ ಮತ್ತು ನಟಿ ರಮ್ಯಾ ಹಾಗೂ ನಟ ಪ್ರಥಮ್ ಮಧ್ಯೆ ಸಾಕಷ್ಟು ಸೋಷಿಯಲ್ ಮೀಡಿಯಾ ವಾರ್ ನಡೆಯುತ್ತಿದೆ.
ಈ ಸಂಬಂಧ ರಮ್ಯಾ ಹಾಗೂ ಪ್ರಥಮ್ ಅವರು ಪೊಲೀಸರಿಗೆ ದೂರು ನೀಡಿ ತನಿಖೆ ಕೂಡ ನಡೆಯುತ್ತಿದೆ. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ನಟ ದರ್ಶನ್ ತುಟಿ ಪಿಟಿಕ್ ಅಂದಿಲ್ಲ. ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆ ದೇವಾಲಯ ದರ್ಶನ ಮಾಡುತ್ತಿದ್ದಾರೆ.
ದರ್ಶನ್ ಮತ್ತು ವಿಜಯಲಕ್ಷ್ಮಿ ಕುಟುಂಬ ಸಮೇತರಾಗಿ ಅಸ್ಸಾಂನ ಕಾಮಾಕ್ಯ ದೇವಿಯ ಸನ್ನಿಧಿಗೆ ನಿನ್ನೆ ನಾಗರಪಂಚಮಿ ದಿನ ಭೇಟಿ ನೀಡಿ ಹರಕೆ ಈಡೇರಿಸಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್ನಲ್ಲಿ ಪ್ರಕಟವಾಗೋ ಬೇಲ್ ಭವಿಷ್ಯ ತಮ್ಮ ಪರ ಇರಲಿ ಅಂತ ದೇಗುಲದಲ್ಲಿ ಪ್ರದಕ್ಷಿಣೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ನಟ ದರ್ಶನ್ ಮತ್ತು ವಿಜಯಲಕ್ಷ್ಮೀ ದಂಪತಿ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ನಟ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಇದೇ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ತೆರಳಿ ಹರಕೆ ಹೊತ್ತಿದ್ದರು.
ʼದಿ ಡೆವಿಲ್ʼ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದ ದರ್ಶನ್ ಇತ್ತೀಚೆಗಷ್ಟೇ ಬೆಂಗಳೂರಿಗೆ ಮರಳಿದ್ದರು. ಕಳೆದ ವಾರ ಸುಪ್ರೀಂಕೋರ್ಟ್ನಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಾದ-ಪ್ರತಿವಾದಗಳು ನಡೆದಿವೆ. ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂ ತೀರ್ಪು ಬರುವ ಸಾಧ್ಯತೆಯಿದ್ದು, ದರ್ಶನ್ ಆತಂಕದಲ್ಲಿದ್ದಾರೆ. ಹೀಗಾಗಿ ಹರಕೆ ತೀರಿಸಲು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ.