ಬೆಂಗಳೂರು: ಕನ್ನಡದ ಆ್ಯನಿಮೇಷನ್ ಸಿನಿಮಾ ಮಹಾವತಾರ ನರಸಿಂಹ ಚಿತ್ರದ ಬಾಕ್ಸ್ ಆಫೀಸ್ ಅಬ್ಬರ ಮುಂದುವರೆದಿದ್ದು, ಬಿಡುಗಡೆಯಾದ ಕೇವಲ 6 ದಿನಕ್ಕೆ ಚಿತ್ರ 37 ಕೋಟಿ ರೂ ಗಳಿಕೆ ಕಂಡಿದೆ.
ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು.
ಅಂದಿನಿಂದ ಇಂದಿನವರೆಗೂ ಚಿತ್ರ ನಿಧಾನವಾಗಿ ತನ್ನ ಬಾಕ್ಸ್ ಆಫೀಸ್ ಗಳಿಕೆಯನ್ನು ಏರಿಸಿಕೊಳ್ಳುತ್ತಾ ಸಾಗಿದ್ದು, ಇದೀಗ 6ನೇ ದಿನಕ್ಕೆ ಚಿತ್ರ ಬರೊಬ್ಬರಿ 37 ಕೋಟಿ ರೂ ಗಳಿಕೆ ಕಂಡಿದೆ.
ಆ ಮೂಲಕ ಈ ಚಿತ್ರ ಬಿಡುಗಡೆಯಾದ ಮೊದಲ ವಾರ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಎಂಬ ಕೀರ್ತಿಗೆ ನರಸಿಂಹ ಪಾತ್ರವಾಗಿದೆ.
ಕಾಂತಾರಾ, ಕೆಜಿಎಫ್ ದಾಖಲೆ ಧೂಳಿಪಟ
ಇನ್ನು ಮಹಾವತಾರ ನರಸಿಂಹ ಚಿತ್ರ ಈಗಾಗಲೇ ಹಿಂದಿಯಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರಾ ಮತ್ತು ನಟ ಯಶ್ ಅಭಿನಯದ ಕೆಜಿಎಫ್ ಚಿತ್ರ ನಿರ್ಮಿಸಿದ್ದ ಮೊದಲ ವಾರದ ಕಲೆಕ್ಷನ್ ದಾಖಲೆಯನ್ನೂ ಹಿಂದಿಕ್ಕಿದೆ.
ಬಿಡುಗಡೆಯಾದ ಮೊದಲ ದಿನ ಹಿಂದಿ ಬೆಲ್ಟ್ ನಲ್ಲಿ 1.38 ಕೋಟಿ ರೂ ಗಳಿಸಿದ್ದ ಚಿತ್ರ, 2ನೇ ದಿನ ಶನಿವಾರ 3.40 ಕೋಟಿ, 3ನೇ ದಿನ ಭಾನುವಾರ 6.77 ಕೋಟಿ, 4ನೇ ದಿನ ಸೋಮವಾರ 3.70, 5ನೇ ದಿನ ಮಂಗಳವಾರ 5.01 ಕೋಟಿ, 6ನೇ ದಿನ ಬುಧವಾರ 5.05 ಕೋಟಿ ರೂ ಗಳೊಂದಿಗೆ ಒಟ್ಟಾರೆ ಹಿಂದಿಯಲ್ಲಿ 25.31 ಕೋಟಿ ರೂ ಗಳಿಕೆ ಮಾಡಿದೆ.
ಹಿಂದಿ-ತೆಲುಗಿನಲ್ಲಿ ಭರ್ಜರಿ ಕಲೆಕ್ಷನ್
ನರಸಿಂಹ ಚಿತ್ರಕ್ಕೆ ಉತ್ತರ ಭಾರತದ ಹಿಂದಿ ಬೆಲ್ಟ್ ಮತ್ತು ತೆಲುಗು ಬೆಲ್ಟ್ ಅಂದರೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ. ತೆಲುಗಿನಲ್ಲಿ ನಟ ಪವನ್ ಕಲ್ಯಾಣ್ ರ ಹರಿಹರ ವೀರಮಲ್ಲು ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆಯಾದರೂ ತೆಲುಗು ಸಿನಿ ಪ್ರೇಕ್ಷಕರು ಮಾತ್ರ ನರಸಿಂಹ ಚಿತ್ರಕ್ಕೆ ಫುಲ್ ಫಿದಾ ಆಗಿದ್ದಾರೆ. ತೆಲುಗು ಬೆಲ್ಟ್ ನಲ್ಲಿ ಕೇವಲ 5 ದಿನಕ್ಕೆ 9 ಕೋಟಿ ರೂ ಕಲೆಕ್ಷನ್ ಮಾಡಿದೆ. ಉತ್ತರ ಭಾರತದಲ್ಲಿ ನರಸಿಂಹ ಚಿತ್ರ ಮೊದಲ 5 ದಿನಕ್ಕೆ 22 ಕೋಟಿ ರೂ ಗಳಿಕೆ ಕಂಡಿದೆ.
ಕನ್ನಡ-ತಮಿಳು, ಮಲಯಾಂಳಂ ನಲ್ಲಿ ತಗ್ಗಿದ ಕಲೆಕ್ಷನ್
ಇನ್ನು ನರಸಿಂಹ ಮೂಲತಃ ಕನ್ನಡ ಚಿತ್ರ.. ಕನ್ನಡ ಹೊಂಬಾಳೆ ಫಿಲಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ಆದರೆ ಕನ್ನಡದಲ್ಲಿ ಈ ಚಿತ್ರದ ಗಳಿಕೆ 2 ಕೋಟಿ ರೂ ಆಸುಪಾಸಿನಲ್ಲಿದೆ. ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಂ ಸೋ' ಚಿತ್ರದ ಎದುರು ನರಸಿಂಹ ಚಿತ್ರದ ಗಳಿಕೆ ಮಂಕಾಗಿದೆ. ಸು ಫ್ರಂ ಸೋ ಚಿತ್ರ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಉಳಿದಂತೆ ತಮಿಳು ಮತ್ತು ಮಲಯಾಳಂನಲ್ಲೂ ಚಿತ್ರದ ಗಳಿಕೆ ಕಡಿಮೆ ಎನ್ನಲಾಗಿದೆ.