ಬೆಂಗಳೂರು: ಅಶ್ಲೀಲ ಸಂದೇಶದ ಹಿನ್ನೆಲೆಯಲ್ಲಿ ದರ್ಶನ್ ಫ್ಯಾನ್ಸ್ ವಿರುದ್ಧದ ಸಿಡಿದೆದ್ದ ನಟಿ ರಮ್ಯಾಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಅಶ್ಲೀಲ ಸಂದೇಶದ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ನಟಿ ರಮ್ಯಾಗೆ ಕನ್ನಡ ಚಿತ್ರರಂಗ ಹಾಗೂ ಹೊರಗಿನವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಈ ವಿಚಾರವಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ 'ಕಾಟೇರ' ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ , ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ಇಂತಹ ವಿಚಾರ ಉದ್ಭವ ಮಾಡಿದವರು ಹಾಗೂ ಮುಂದುವರೆಸಿಕೊಂಡು ಹೋಗುವವರಿಗೆ ಶಿಕ್ಷೆ ಆಗ್ಬೇಕು. ಎದುರು ನಿಂತು ಮಾತನಾಡುವವರನ್ನು ಎದುರಿಸಬಹುದು. ಎಲ್ಲೋ ನಿಂತು ಮಾತಾಡುವವರನ್ನು ಹೇಗೆ ಸಹಿಸಿಕೊಳ್ಳೋದು? ಯಾರೇ ಹೀರೋ ಆಗಿದ್ರೂ ಅವರ ಅಭಿಮಾನಿಗಳು ನಿಜಕ್ಕೂ ಹೀಗೆ ಮಾಡಿದ್ದೇ ಆಗಿದ್ರೆ ತಪ್ಪು. ನಿಮ್ಮ ಮನೆ ಹೆಣ್ಣು ಮಕ್ಕಳನ್ನ ತೃಪ್ತಿ, ಸಂತೋಷವಾಗಿಟ್ಟುಕೊಳ್ಳಿ. ಯಾವ ಸ್ಟಾರ್ ನಟರೂ ಬಂದು ಕಾಪಾಡೋಲ್ಲ ಎಂದಿದ್ದಾರೆ.
ಹೀರೋಗೆ ಸಪೋರ್ಟ್ ಮಾಡ್ಕೊಂಡು ನಿಲ್ಲೋದಾದ್ರೆ ಎದುರು ಬಂದು ನಿಲ್ಲೋದು ಗಂಡಸ್ತನ. ಆದರೆ ಎಲ್ಲೋ ಇದ್ದುಕೊಂಡು ಕೆಟ್ಟ ಕೆಟ್ಟ ಸಂದೇಶ ಕಳುಹಿಸಿದ್ದಾರೆ. ನಿಮ್ಮ ಸ್ವಾರ್ಥಕ್ಕೆ ಚಿತ್ರರಂಗ ಬಲಿ ಕೊಡಬೇಡಿ, ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ರಾಜ್ ಕುಮಾರ್, ಅಂಬರೀಶ್, ವಿಷ್ರ್ಣುವರ್ಧನ್ ಚಿತ್ರರಂಗ ಕಟ್ಟಿಕೊಟ್ಟಿದ್ದಾರೆ. ಅಭಿಮಾನಿಗಳಿಗೆ ಹೇಳಿ ಪರಿಸ್ಥಿತಿ ತಿಳಿ ಪಡಿಸಬೇಕು. ದರ್ಶನ್ ಆಗಲಿ ಸುದೀಪ್ ಆಗಲಿ ಯಾವುದೇ ಸೂಪರ್ ಸ್ಟಾರ್ ಆಗಲಿ ಮುಂದೆ ಬರಬೇಕು. ನಾನು ಸ್ಪಂದಿಸುತ್ತೇನೆ. ಶೀಘ್ರದಲ್ಲೇ ಸಭೆ ಕರೆಯುತ್ತೇವೆ. ಹೇಗೆ ಇದಕ್ಕೆ ಸ್ಪಂದಿಸಬೇಕು ಅನ್ನೋದನ್ನ ಕೇಳ್ತೀವಿ. ನಮ್ಮ ಮನೆಗೆ ಹತ್ತಿರೋ ಬೆಂಕಿಯನ್ನ ನಾವು ಆರಿಸಿಕೊಳ್ಳೋಕೆ ಪ್ರಯತ್ನ ಮಾಡ್ತೀವಿ ಎಂದು ಹೇಳಿದರು.