ಹೈದರಾಬಾದ್: ಈ ಹಿಂದೆ ಪುಷ್ಪಾ 2 ಚಿತ್ರದ ಪ್ರದರ್ಶನ ವೇಳೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ವಿರುದ್ಧ ಎಫ್ ಐಆರ್ ಹಾಕುವಂತೆ ಸೂಚಿಸಿದ್ದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇದೀಗ ಅದೇ ಅಲ್ಲು ಅರ್ಜುನ್ ಗೆ ಪ್ರಶಸ್ತಿ ನೀಡಿ ಗೌರವಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು... ಈ ಹಿಂದೆ ಅಂದರೆ ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆ ಕಂಡಿದ್ದ ಪುಷ್ಪಾ 2 ಚಿತ್ರದ ಪ್ರದರ್ಶನ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ, ಆಕೆಯ ಪುತ್ರ ಗಂಭೀರವಾಗಿ ಗಾಯಗೊಂಡಿದ್ದ.
ಈ ಪ್ರಕರಣದಲ್ಲಿ ಅಂದು ನಟ ಅಲ್ಲು ಅರ್ಜುನ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೇ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಮಾತ್ರವಲ್ಲದೇ ತೆಲಂಗಾಣ ಸದನದಲ್ಲೂ ಅಲ್ಲು ಅರ್ಜುನ್ ವಿರುದ್ಧ ಕಿಡಿಕಾರಿ ನಟ ಅಲ್ಲು ಅರ್ಜುನ್ ಮಾಡಿದ್ದ ರೋಡ್ ಶೋ ನಿಂದಾಗಿಯೇ ಕಾಲ್ತುಳಿತ ಸಂಭವಿಸಿತ್ತು ಎಂದು ಕಿಡಿಕಾರಿದ್ದರು.
ಯಾವ ಸಿನಿಮಾ ವಿಚಾರವಾಗಿ ಜೈಲಿಗೆ ಹೋಗಿದ್ದರೋ ಅದೇ ಚಿತ್ರಕ್ಕೆ ಪ್ರಶಸ್ತಿ!
ಈ ಘಟನೆ ಸಂಭವಿಸಿ 7 ತಿಂಗಳಗಳೇ ಆಗುತ್ತಿದ್ದು ಇದೀಗ ಇದೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೇ ನಟ ಅಲ್ಲು ಅರ್ಜುನ್ ಗೆ ತಮ್ಮ ಕೈಯಾರೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ತೆಲಂಗಾಣ ಸರ್ಕಾರ ನೀಡುವ ಗದ್ದರ್ ಪ್ರಶಸ್ತಿಗೆ ನಟ ಅಲ್ಲು ಅರ್ಜುನ್ ಉತ್ತಮ ನಟ ವಿಭಾಗದಲ್ಲಿ ಆಯ್ಕೆಯಾಗಿದ್ದು ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ರೇವಂತ್ ರೆಡ್ಡಿ ನಟ ಅಲ್ಲು ಅರ್ಜುನ್ ಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಅಚ್ಟರಿ ಎಂದರೆ ಯಾವ ಸಿನಿಮಾದಿಂದಾಗಿ ಕಾಲ್ತುಳಿತ ಸಂಭವಿಸಿತೋ ಅದೇ ಪುಷ್ಪಾ 2 ಚಿತ್ರದ ನಟನೆಗಾಗಿ ನಟ ಅಲ್ಲು ಅರ್ಜುನ್ ಗೆ ಈಗ ಗದ್ದರ್ ಪ್ರಶಸ್ತಿ ದೊರೆತಿದೆ.
FIR ಹಾಕಿಸಿದ್ದವರೇ ಪ್ರಶಸ್ತಿ ನೀಡಿದರು
ಮಾತ್ರವಲ್ಲದೇ ಅಂದು ಯಾರು ಅಲ್ಲು ಅರ್ಜುನ್ ವಿರುದ್ಧ ಎಫ್ ಐಆರ್ ಹಾಕಿಸಿದರೋ ಅದೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇಂದು ನಟ ಅಲ್ಲು ಅರ್ಜುನ್ ಪ್ರಶಸ್ತಿ ನೀಡಿದ್ದಾರೆ.
ಪುಷ್ಪಾ 2 ಡೈಲಾಗ್ ಹೇಳಿ ಟಾಂಗ್ ಕೊಟ್ಟ ಅಲ್ಲು ಅರ್ಜುನ್
ಇನ್ನು ರೇವಂತ್ ರೆಡ್ಡಿಅವರಿಂದ ಪ್ರಶಸ್ತಿ ಸ್ವೀಕರಿಸಿದ ನಟ ಅಲ್ಲು ಅರ್ಜುನ್ ಅವರ ಅನುಮತಿ ಪಡೆದು ಪುಷ್ಪಾ 2 ಚಿತ್ರದ ಡೈಲಾಗ್ ಹೇಳಿದ್ದು ಈ ಕಾರ್ಯಕ್ರಮದ ಹೈಲೈಟ್ ಆಗಿತ್ತು.