ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ 'ಕೊತ್ತಲವಾಡಿ' ಬಿಡುಗಡೆಗೆ ಸಿದ್ಧವಾಗಿದ್ದು, ಆಗಸ್ಟ್ 1 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವು ಕನ್ನಡ ಸಿನಿಮಾ ರಂಗಕ್ಕೆ ಹೊಸ ಧ್ವನಿಯನ್ನು ತರುವ ಗುರಿಯನ್ನು ಹೊಂದಿದೆ. ಕನ್ನಡ ಚಿತ್ರರಂಗದತ್ತ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ನಟ ಯಶ್ ಅವರ ತಾಯಿ ಇದೀಗ ಸುದ್ದಿಯಲ್ಲಿದ್ದಾರೆ.
ಪುಷ್ಪಾ ಅವರ ಪ್ರಕಾರ, ನಿರ್ಮಾಣ ಕ್ಷೇತ್ರಕ್ಕೆ ಅವರ ಪ್ರವೇಶವು ಹೊಸ ಯುಗದ ಕಥೆಗಾರರು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಬೆಂಬಲಿಸುವ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಶ್ರೀರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪೃಥ್ವಿ ಅಂಬಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈವರೆಗೂ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೃಥ್ವಿಗೆ ಜೋಡಿಯಾಗಿ ಕಾವ್ಯ ಶೈವ ನಟಿಸಿದ್ದಾರೆ. ಕಿರುತೆರೆಯಲ್ಲಿ ನಟಿಸಿದ್ದ ಕಾವ್ಯ ಇದೀಗ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಪೋಷಕ ಪಾತ್ರದಲ್ಲಿ ಅನುಭವಿ ಕಲಾವಿದರಾದ ಗೋಪಾಲಕೃಷ್ಣ ದೇಶಪಾಂಡೆ ಮತ್ತು ರಾಜೇಶ್ ನಟರಂಗ ಸೇರಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಕೊತ್ತಲವಾಡಿ ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ನೀಡಿದ್ದು, ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕಾರ್ತಿಕ್ ಎಸ್ ಅವರ ಛಾಯಾಗ್ರಹಣ ಮತ್ತು ರಾಮಿಶೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದರೆ, ವಿ ನಾಗೇಂದ್ರ ಪ್ರಸಾದ್, ಕಿನ್ನಲ್ ರಾಜ್, ಪ್ರಮೋದ್ ಮರವಂತೆ ಮತ್ತು ಗೌಸ್ ಪೀರ್ ಸಾಹಿತ್ಯ ಬರೆದಿದ್ದಾರೆ.