ನಟ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ನಾಲ್ಕು ವರ್ಷ ಕಳೆದರೂ ನಾಡಿನ ಜನರು ಅವರ ಮೇಲಿಟ್ಟಿರುವ ಅಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಸರಳತೆ, ಸಹೃದಯತೆ, ವಿನಮ್ರತೆ ಹಾಗೂ ಸಾಮಾಜಿಕ ಕಾರ್ಯಗಳಿಂದ ಹೆಸರಾದ ಅಪ್ಪು ಅಜರಾಮರ.
ನಿನ್ನೆಯಷ್ಟೇ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ ಅಭಿಮಾನಿಗಳಿಗೆ ಅವರ ಪತ್ನಿ ಅಶ್ವಿನಿ ಪುನೀತ್ ಕುಮಾರ್ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ‘ಅಪ್ಪು’ ಜೀವನ ಚರಿತ್ರೆ ಶೀಘ್ರದಲ್ಲಿಯೇ ಪುಸ್ತಕ ರೂಪದಲ್ಲಿ ಹೊರಬರಲಿದೆ.
ಅಶ್ವಿನಿ ಹಾಗೂ ಪ್ರಕೃತಿ ಬನವಾಸಿ ರಚಿಸಿರುವ ಪುಸ್ತಕದ ಮುಖಪುಟ ಬಿಡುಗಡೆಯಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲಿ ಪುಸ್ತಕ ರಚಿಸಲಾಗಿದೆ. ಇದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ ಎನ್ನಲಾಗಿದೆ.
ಅಪ್ಪು ಬರ್ತ್ಡೇ ಸಂದರ್ಭದಲ್ಲಿ ಅಶ್ವಿನಿ ಹಾಗೂ ಮಕ್ಕಳು ಪುಸ್ತಕ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಪ್ಪು ಕಲರ್ಫುಲ್ ಜೀವನವನ್ನು ತೆರೆದಿಡುವ ಪುಸ್ತಕಕ್ಕೆ ಬ್ಲ್ಯಾಕ್ ಆ್ಯಂಡ್ ವೈಟ್ನ ಕವರ್ ಪೇಜ್ ಮಾಡಲಾಗಿದೆ. ಈ ಪುಸ್ತಕದಲ್ಲಿ ಯಾವೆಲ್ಲ ವಿಚಾರಗಳು ಇರಲಿವೆ ಎನ್ನುವ ಕುತೂಹಲ ಮೂಡಿದೆ. ಆಪ್ತರನ್ನು, ಕುಟುಂಬದವರಿಂದ ಮಾಹಿತಿ ಕಲೆ ಹಾಕಿ ಪುಸ್ತಕ ಬರೆಯಲಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತವಾಗಿ ‘ಅಪ್ಪು’ ಪುಸ್ತಕ ರಿಲೀಸ್ ಆಗುವ ಸಾಧ್ಯತೆಯಿದೆ.
ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, ಪ್ರಸ್ತುತಪಡಿಸುತ್ತಿದ್ದೇವೆ 'ಅಪ್ಪು' - ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ಎಂದು ಬರೆದುಕೊಂಡಿದ್ದಾರೆ.