ಗಾಯಕ ಸೋನು ನಿಗಮ್ 
ಸಿನಿಮಾ ಸುದ್ದಿ

ಕನ್ನಡಿಗರ ಕುರಿತು ಹೇಳಿಕೆ: ಗಾಯಕ Sonu Nigam​​ ವಿರುದ್ಧ KFI 'ಅಸಹಕಾರ', 'ನಿಷೇಧ'ದ ಕಠಿಣ ಕ್ರಮ!, ಪೊಲೀಸರಿಂದ ನೋಟಿಸ್

ಗಾಯಕ ಸೋನು ನಿಗಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ನರಸಿಂಹುಲು ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು ಈ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಬೆಂಗಳೂರು: ಕನ್ನಡಿಗರ ಕುರಿತು ಹೇಳಿಕೆ ನೀಡಿದ್ದ ಖ್ಯಾತ ಗಾಯಕ ಸೋನು ನಿಗಮ್ (Sonu Nigam) ವಿರುದ್ಧ ಕರ್ನಾಟಕ ಚಲನಚಿತ್ರ ಮಂಡಳಿ ಕೊನೆಗೂ ಕಠಿಣ ಕ್ರಮ ಜರುಗಿಸಿದ್ದು, ಸೋನು ನಿಗಮ್ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಅವರ ಮೇಲೆ ಪರೋಕ್ಷ ನಿಷೇಧ ಹೇರಲು ಫಿಲಂ ಚೇಂಬರ್ ನಿರ್ಧರಿಸಿದೆ.

ಗಾಯಕ ಸೋನು ನಿಗಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ನರಸಿಂಹುಲು ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು ಈ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸೋನು ನಿಗಮ್ ಪ್ರಕರಣ ಸಂಬಂಧಿ ಈ ವರೆಗೂ ಕನ್ನಡಿಗರ ಕ್ಷಮೆ ಕೇಳಿಲ್ಲ.. ಹೀಗಾಗಿ ಅವರು ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿಯ ಸದಸ್ಯರು ಪಾಲ್ಗೊಳ್ಳದಂತೆ ಸೂಚಿಸಲಾಗಿದೆ ಎಂದು ನರಸಿಂಹುಲು ಹೇಳಿದರು.

ಕನ್ನಡದಲ್ಲಿ ಯಾವುದೇ ಹಾಡು ಹಾಡಿಸದಿರಲು ನಿರ್ಧಾರ

ಇನ್ನು ಪ್ರಕರಣ ಸಂಬಂಧ ಸೋನು ನಿಗಮ್ ವಿರುದ್ಧ ಕಠಿಣ ಕ್ರಮ ಜರುಗಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಅವ​​ರಿಂದ ಕನ್ನಡ ಹಾಡುಗಳನ್ನು ಹಾಡಿಸದಿರುವ ನಿರ್ಧಾರ ಮಾಡಲಾಗಿದೆ. ಸೋನು ನಿಗಮ್​ಗೆ ಕನ್ನಡದ ಮೇಲೆ ವಿಶೇಷ ಪ್ರೀತಿ-ಗೌರವ ಇದ್ದಿದ್ದು ನಿಜ. ಆದರೆ, ಅವರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ಕನ್ನಡ ಕನ್ನಡ.. ಹೀಗೆ ಹೇಳಿದ್ದರಿಂದಲೇ ಪಹಲ್ಗಾಮ್ ದಾಳಿ ಆಯಿತು’ ಎನ್ನುವ ಮೂಲಕ ಸೋನು ನಿಗಮ್ ಸುಖಾ ಸುಮ್ಮನೆ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡರು. ಆ ಬಳಿಕ ಅವರು ಹೇಳಿಕೆಗೆ ಸ್ಪಷ್ಟನೆ ಕೊಟ್ಟರೇ ಹೊರತು ಕ್ಷಮೆ ಕೇಳಿಲ್ಲ. ಈಗ ಇದನ್ನು ಗಂಭೀರವಾಗಿ ಪರಿಗಣಿಸಿರೋ ಕರ್ನಾಟಕ ಫಿಲ್ಮ್ ಚೇಂಬರ್ ಅವರಿಗೆ ಅವಕಾಶ ನೀಡದಿರಲು ನಿರ್ಧಾರ ತೆಗೆದುಕೊಂಡಿದೆ.

ಈ ಬಗ್ಗೆ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ‘ಘಟನೆ ಬಳಿಕ ಈವರೆಗೂ ಸೋನು ನಿಗಮ್​ ಕನ್ನಡಿಗರ ಬಳಿ ಕ್ಷಮೆ‌ ಕೇಳಿಲ್ಲ.  ಇನ್ನು ಮುಂದೆ ಸೋನು ನಿಗಮ್ ಅವರಿಂದ ಚಿತ್ರರಂಗದವರು ಮ್ಯೂಸಿಕಲ್ ನೈಟ್ಸ್ ಮಾಡುವುದಿಲ್ಲ. ಅವರ ಬಳಿ ಹಾಡನ್ನು ಹಾಡಿಸೋದಿಲ್ಲ. ಈ ಕ್ಷಣದಿಂದಲೇ ಸೋನುಗೆ ಅಸಹಕಾರ ತೋರಬೇಕೆಂದು ನಿರ್ಧಾರ ಮಾಡಲಾಗಿದೆ’ ಎಂದಿದ್ದಾರೆ.

ಮೂಲಗಳ ಪ್ರಕಾರ ಈ ಸಭೆಯಲ್ಲಿ ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘಗಳು ಭಾಗಿಯಾಗಿದ್ದವು ಎಂದು ಹೇಳಲಾಗಿದೆ.

ಕನ್ನಡ ಹಾಡು ಕೇಳಿದಕ್ಕೆ ಪೆಹಲ್ಗಾಮ್​ ದಾಳಿ ಜೊತೆಗೆ ಹೋಲಿಕೆ ಮಾಡಿದ್ದ ಸೋನು ನಿಗಮ್ ಮೇಲೆ ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಕ್ಷಮೆ ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಈ ಗಾಯಕ ಉದ್ದಟತನ ಮೆರೆದಿದ್ದಾರೆ ಎಂದು ಇನ್ನೂ ಹೆಚ್ಚಿನ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ಫಿಲಂ ಚೇಂಬರ್ ಈ ನಿರ್ಧಾರ ಕೈಗೊಂಡಿದೆ.

ಕನ್ನಡ ಚಿತ್ರರಂಗದಿಂದ ಸೋನು ನಿಗಮ್​ ರನ್ನ ಬ್ಯಾನ್ ಮಾಡಲು ಕನ್ನಡ ಸಂಘಟನೆಗಳ ಒತ್ತಾಯ ಶುರುವಾಗಿದೆ. ಇಂದಿನ ವಾಣಿಜ್ಯ ಮಂಡಳಿ ಸಭೆಯಲ್ಲಿ ಸೋನು ಬ್ಯಾನ್ ಮಾಡುವ ಕುರಿತು ಚರ್ಚೆ ನಡೆದಿತ್ತು.

ಘಟನೆ ಹಿನ್ನಲೆ

ಬಾಲಿವುಡ್ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎನ್ನಲಾದ ಹೇಳಿಕೆಗಾಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು, ಅವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ಎಫ್‌ಐಆರ್ (FIR) ದಾಖಲಾಗಿದೆ. ಆದರೆ, ಈ ವಿವಾದದ ನಡುವೆಯೂ ಸೋನು ನಿಗಮ್ ಅವರು ತಮ್ಮ ವೃತ್ತಿಪರ ಕೆಲಸಗಳನ್ನು ಮತ್ತು ಹಾಡಿನ ಪ್ರಚಾರ ಕಾರ್ಯಗಳನ್ನು ನಿಲ್ಲಿಸದೇ ಮುಂದುವರೆಸಿದ್ದಾರೆ.

ಏನಿದು ಘಟನೆ?

ಇತ್ತೀಚೆಗೆ ಸೋನು ನಿಗಮ್ ಅವರು ತಮ್ಮ ಹೊಸ ಹಿಂದಿ ಹಾಡು 'ಸುನ್ ಜರಾ'ದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಾ, ಹಿಂದಿ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ಪ್ರಸ್ತಾಪಿಸುವ ಭರದಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲವು ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿ, ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.

ಗಾಯಕನ ವಿರುದ್ಧ ದೂರು:

ಗಾಯಕ ಸೋನು ನಿಗಮ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ರಕ್ಷಣಾ ವೇದಿಕೆ (ಕರವೇ), ಗಾಯಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಕರವೇ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಗೌಡ ಅವರು ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಸೋನು ನಿಗಮ್ ಅವರ ಮಾತುಗಳು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿವೆ ಮತ್ತು ಅವರು ತಕ್ಷಣವೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.

ಪೊಲೀಸರು ಕರವೇ ನೀಡಿದ ದೂರಿನ ಆಧಾರದ ಮೇಲೆ ಸೋನು ನಿಗಮ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295A (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಅವರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು 153A (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯಗಳನ್ನು ಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪೊಲೀಸರಿಂದ ನೋಟಿಸ್

ಏತನ್ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕ ಸೋನು ನಿಗಮ್ ಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಕ ಸೋನು ನಿಗಮ್ ಗೆ ಅವಲಹಳ್ಳಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಕಾರ್ಯಕ್ರಮ ಆಯೋಜಕರಿಗೂ ನೋಟಿಸ್ ನೀಡಲು ಸಿದ್ಧತೆ ಮಾಡಲಾಗಿದೆ. ಇಂದು ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ನೀಡಲಾಗಿದೆ. ನೋಟಿಸ್ ತಲುಪಿದ ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ಸೋನು ನಿಗಮ್ ಮಾತ್ರವಲ್ಲದೇ ಕಾರ್ಯಕ್ರಮ ಆಯೋಜಕರಿಗೂ ನೋಟಿಸ್ ನೀಡಲು ಸಿದ್ದತೆ ಮಾಡಲಾಗಿದೆ. ಯಾವ ಕಂಟ್ರಾಕ್ಟ್ ಮೇಲೆ ಕಾರ್ಯಕ್ರಮಕ್ಕೆ ಬಂದಿದ್ದರು? ಎಷ್ಟು ಗಂಟೆಗಳ ಕಾರ್ಯಕ್ರಮ, ಬೇರೆ ಯಾರು ಅವರ ಜೊತೆಯಲ್ಲಿ ಇದ್ದರು ಎಂದು ಪ್ರಶ್ನೆ ಮಾಡಲಾಗುತ್ತದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT