ಅರ್ಜುನ್ ಜನ್ಯಾ ನಿರ್ದೇಶನದ ಬಹು ನಿರೀಕ್ಷಿತ' 45' ಪ್ಯಾನ್ ಇಂಡಿಯಾ ಸಿನಿಮಾದ 'ಶಿವಂ ಶಿವಂ ಸನಾತನಂ' ಹಾಡು ಇತ್ತೀಚಿಗೆ ಬಿಡುಗಡೆಯಾಯಿತು. ದೆಹಲಿಯ ಆನಂದ ಪೀಠಾಧಿಪತಿ ಬಾಲಖಾನಂದ ಗಿರಿ ಮಹಾರಾಜ್ ಸ್ವಾಮೀಜಿ ವಿಶೇಷ ಅತಿಥಿಯಾಗಿ ಆಗಮಿಸಿ 'ಶಿವಂ ಶಿವಂ ಸನಾತನಂ' ಹಾಡನ್ನು ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಕಳೆದ ವರ್ಷವೇ ಕನ್ನಡ ವರ್ಸನ್ ಡಬ್ಬಿಂಗ್ ಪೂರ್ಣಗೊಳಿಸಿದ್ದು, ಈಗ ತಮಿಳು ವರ್ಶನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಧ್ವನಿ ಎಲ್ಲರಿಗೂ, ಎಲ್ಲಾ ಕಡೆ ತಲುಪಬೇಕು. ಹೀಗಾಗಿ ಸಾಧ್ಯವಾದಷ್ಟು ಎಲ್ಲಾ ಭಾಷೆಗಳಲ್ಲಿ ನಾನೇ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಈ ಸಮಾರಂಭ ಅದ್ದೂರಿ ಸಿನಿಮಾ ಕಾರ್ಯಕ್ರಮ ಮಾತ್ರವಲ್ಲದೇ, ಧಾರ್ಮಿಕ ಕಾರ್ಯಕ್ರಮದಂತೆಯೂ ಮೂಡಿಬಂದಿತು. '45' ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.
ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಉಮಾ ರಮೇಶ್ ರೆಡ್ಡಿ ಮತ್ತು ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಅರ್ಜುನ್ ಜನ್ಯಾ,ಈ ಚಿತ್ರ ನನಗೆ ಆಧ್ಯಾತ್ಮಿಕತೆಯ ಪಯಣವಾಗಿದೆ. ಶಿವರಾಜಕುಮಾರ್ ಸರ್ ಅವರಿಗೆ ನಾನು ಯಾವಾಗಲೂ ಋಣಿಯಾಗಿದ್ದೇನೆ. ಅವರ ಪ್ರೋತ್ಸಾಹವು ನನಗೆ ನಿರ್ದೇಶನದತ್ತ ಹೆಜ್ಜೆ ಹಾಕಲು ಧೈರ್ಯ ನೀಡಿತು. ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಮತ್ತು ವಿಜಯ್ ಪ್ರಕಾಶ್ ಅವರ ಕಂಚಿನ ಕಂಠದಿಂದ ಹಾಡು ಚೆನ್ನಾಗಿ ಮೂಡಿ ಬಂದಿದೆ ಎಂದರು.
ಸೃಜನಶೀಲ ಕೊಡುಗೆಗಾಗಿ ಮಂಗಳೂರಿನ PLANGALE ಸ್ಟುಡಿಯೋದ ಕಾರ್ತಿಕ್ ಮತ್ತು ತಂಡದ ಕಾರ್ಯವನ್ನು ಶ್ಲಾಘಿಸಿದರು.
ನಿರ್ಮಾಪಕ ರಮೇಶ್ ರೆಡ್ಡಿ, "ಮಹಾರಾಜ್ ಜೀ ದೆಹಲಿಯಿಂದ ಬಂದು ಹಾಡು ಬಿಡುಗಡೆ ಮೂಲಕ ಆಶೀರ್ವಾದ ಮಾಡಿದ್ದಾರೆ. ಮೊದಲ ದಿನದಿಂದ ಅರ್ಜುನ್ ಜನ್ಯ ಅವರ ಬದ್ಧತೆ ಮೆಚ್ಚುವಂತಹದ್ದು, ಈ ಟ್ರ್ಯಾಕ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದು, ದೇಶಾದ್ಯಂತ ಪ್ರತಿಧ್ವನಿಸುವ ನಿರೀಕ್ಷೆಯಿದೆ ಎಂದರು.
ಶಿವಂ ಶಿವಂ ಸನಾತನಂ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಸತ್ಯ ಹೆಗ್ಡೆ ಅವರ ಛಾಯಾಗ್ರಹಣದೊಂದಿಗೆ, ಅರ್ಜುನ್ ಜನ್ಯ ಅವರು 45 ಕ್ಕೆ ಆಕ್ಷ್ಯನ್ ಕಟ್ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ. ಇದು ಆಗಸ್ಟ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.