ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕನ್ನಡದ ಹಿರಿಯ ನಟ-ನಟಿಯರು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟಿ ರಚಿತಾ ರಾಮ್ ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ ಎಂಬ ಗಾಧೆ ಮೂಲಕ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಚಿತಾ ರಾಮ್ ಅವರು, ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು.. ಹಾಡಿನ ಮೂಲಕ ಮಾತು ಆರಂಭಿಸಿದರು. ಕನ್ನಡ, ಕರ್ನಾಟಕ ಅಂತ ಬಂದರೆ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಒಂದು ಎಮೋಷನ್. ನಮ್ಮ ಕನ್ನಡ ಭಾಷೆಯ ಬಗ್ಗೆ ಯಾರಾದರೂ ಟೀಕೆ ಮಾಡುತ್ತಿದ್ದಾರೆ ಎಂದರೆ ನಾವು ಸುಮ್ಮನೆ ಕೂರೋಕೆ ಆಗಲ್ಲ. ನಾವು ಕನ್ನಡದವರು ಎಷ್ಟು ವಿಶಾಲ ಹೃದಯದವರು ಎಂದರೆ ಎಲ್ಲ ಭಾಷೆಯ ಸಿನಿಮಾ ನೋಡುತ್ತೇವೆ, ಪ್ರತಿ ಭಾಷೆಯ ಸಿನಿಮಾ ಹಾಡುಗಳನ್ನು ಕೇಳುತ್ತೇವೆ. ಕಲಾವಿದರಿಗೆ ಬೆಂಬಲ ಕೊಡುತ್ತೇವೆ. ಆದರೆ ನಮ್ಮ ಭಾಷೆ ಬಗ್ಗೆ ಯಾರಾದರೂ ಮಾತನಾಡಿದರೆ ನಾವು ಯಾಕೆ ಧ್ವನಿ ಎತ್ತಬಾರದು ಎಂದರು.
ನಾವು ಮತ್ತೊಂದು ಭಾಷೆ ಬಗ್ಗೆ ಕೆಟ್ಟದಾಗಿ ಮಾತನಾಡಲ್ಲ. ಎಲ್ಲ ಭಾಷೆಯನ್ನೂ ನಾವು ಗೌರವಿಸುತ್ತೇವೆ. ಕನ್ನಡದ ಬಗ್ಗೆ ಯಾರೂದರೂ ಕೆಟ್ಟದಾಗಿ ಮಾತನಾಡಿದರೆ ನಾವು ಎದ್ದು ನಿಲ್ಲಬೇಕು. ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ ಎಂಬ ಕನ್ನಡದ ಹಾಡು ಕೂಡ ನನಗೆ ನೆನಪಿಗೆ ಬರುತ್ತಿದೆ. ಚಿಕ್ಕವರು ತಪ್ಪು ಮಾಡಿದರೆ ಕ್ಷಮೆ ಕೇಳುವ ತನಕ ಬಿಡಲ್ಲ. ಆದರೆ ದೊಡ್ಡವರು ತಪ್ಪು ಮಾಡಿದರೆ? ತಪ್ಪು ಮಾಡಿದ ಬಳಿಕ ಕ್ಷಮೆ ಕೇಳುವುದರಲ್ಲಿ ಏನು ತಪ್ಪಿದೆ?’ ಎಂದು ರಚಿತಾ ರಾಮ್ ಪ್ರಶ್ನಿಸಿದ್ದಾರೆ.