ಪ್ರಶಾಂತ್ ರಾಜಪ್ಪ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ನಟ ರಿಷಿ ನಾಯಕನಾಗಿ ನಟಿಸುತ್ತಿದ್ದು, ಚಿತ್ರ ಇದೀಗ ವೇಗ ಪಡೆಯುತ್ತಿದೆ. ತಮ್ಮ ತೀಕ್ಷ್ಣ ಮತ್ತು ಹಾಸ್ಯಮಯ ಸಂಭಾಷಣೆಗಳಿಗೆ ಹೆಸರುವಾಸಿಯಾದ ಪ್ರಶಾಂತ್, ಇನ್ನೂ ಹೆಸರಿಡದ ಈ ಕಾಮಿಡಿ-ಡ್ರಾಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.
ಸದ್ಯ ಚಿತ್ರದ ಪಾತ್ರವರ್ಗವನ್ನು ಗೌಪ್ಯವಾಗಿಟ್ಟಿದ್ದರೂ, ಸಿನಿಮಾ ಎಕ್ಸ್‌ಪ್ರೆಸ್‌ಗೆ ಲಭ್ಯವಾಗಿರವ ಮಾಹಿತಿ ಪ್ರಕಾರ, ಚಿತ್ರಕ್ಕೆ ಅಂಜಲಿ ಅನೀಶ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಪದವಿ ಪೂರ್ವ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಅಂಜಲಿ, ಇದೀಗ ಆಸಕ್ತಿದಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂಜಲಿ ಮೊದಲ ಬಾರಿಗೆ ನಟ ರಿಷಿ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅವರು ಕೊನೆಯ ಬಾರಿಗೆ ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಸೆಟ್‌ಗೆ ಸೇರಿದ ನಂತರ ಚಿತ್ರತಂಡ ಅವರ ಪಾತ್ರದ ವಿವರಗಳನ್ನು ಬಹಿರಂಗಪಡಿಸಲಿದೆ.
ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆದಿದ್ದಾರೆ. ಚಿತ್ರಕ್ಕೆ ಅಶೋಕ್ ಅವರ ಛಾಯಾಗ್ರಹಣವಿದೆ. ಚಿತ್ರೀಕರಣವು ಪ್ರಾಥಮಿಕವಾಗಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಕೆಲವು ಸನ್ನಿವೇಶಗಳನ್ನು ಬೇರೆಡೆ ಯೋಜಿಸಲಾಗಿದೆ.