ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಹಾಗೂ ಪ್ರೇಮಾ ಅಭಿನಯದ ಸೂಪರ್ ಹಿಟ್ ಚಿತ್ರ 'ಯಜಮಾನ' 25 ವರ್ಷಗಳ ನಂತರ ಆಧುನಿಕ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಗೆ ಸಜ್ಜಾಗಿದೆ.
ಮೆಹರುನ್ನಿಸಾ ರೆಹಮಾನ್ ನಿರ್ಮಾಣದ ಹಾಗೂ ಆರ್.ಶೇಷಾದ್ರಿ – ರಾಧಾ ಭಾರತಿ ನಿರ್ದೇಶನದ ಯಜಮಾನ ಚಿತ್ರವನ್ನು ವಿಷ್ಣುವರ್ಧನ್ ಅಭಿಮಾನಿಯಾಗಿರುವ ಎಸ್.ಡಿ. ಮುನಿಸ್ವಾಮಿ, ರಾಜ್ಯಾದ್ಯಂತ ಅದ್ದೂರಿಯಾಗಿ ಮರು ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರವನ್ನು ಡಿಐ ಬಳಸಿ 4k ಡಿಜೆಟಲ್ ಪ್ರೊಜೆಕ್ಷನ್‌ಗೆ ತಯಾರು ಮಾಡಲಾಗಿದೆ. ಮೋನೊ ಟ್ರ್ಯಾಕ್ ನಲ್ಲಿದ್ದ ಈ ಚಿತ್ರದ ಕಲಾವಿದರ ಧ್ವನಿಗಳನ್ನು ಸಹ 5.1 ಹಾಗೂ 7.1 ಡಿಜಿಟಲ್ ಸೌಂಡ್‌ಗೆ ವರ್ಗಾಯಿಸಲಾಗಿದೆ.
ಚಿತ್ರದ ರಜತೋತ್ಸವವನ್ನು ಸಂಭ್ರಮಿಸಲು ಕಲಾವಿದರ ಸಂಘದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕರು ಹಾಗೂ ಕಲಾವಿದರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ನಿರ್ಮಾಪಕ ರೆಹಮಾನ್, 2000 ಇಸವಿಯಲ್ಲಿ ತೆರೆ ಕಂಡಿದ್ದ ಯಜಮಾನ ಚಿತ್ರ 130ಕ್ಕೂ ಹೆಚ್ಚು ಕಡೆ ಶತದಿನೋತ್ಸವ, 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಪ್ಪತ್ತೈದು ವಾರ ಹಾಗೂ 4 ಕಡೆಗಳಲ್ಲಿ 1 ವರ್ಷ ಯಶಸ್ವಿ ಪ್ರದರ್ಶನ ಕಂಡಿದೆ. 25 ವರ್ಷಗಳ ಹಿಂದೆಯೇ ರೂ. 35 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು ಎಂದು ಹೇಳಿದರು.
ನುರಿತ ತಂತ್ರಜ್ಞರನ್ನು ಕರೆಸಿ ಅವರಿಂದ ಈಗಿನ ಆಧುನಿಕ ರೀತಿಯಲ್ಲಿ ಸೌಂಡ್ ಎಫೆಕ್ಟ್ ಅಳವಡಿಸಲಾಗಿದೆ. ಇದಕ್ಕೆಲ್ಲಾ ಬಹಳ ಸಮಯ ಹಾಗೂ ಹಣ ವೆಚ್ಚವಾಗಿದೆ. ಮುನಿಸ್ವಾಮಿ ಅವರು ಯಾವುದೇ ಕೊರತೆ ಬಾರದ ಹಾಗೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ತಿಳಿಸಿದರು.
ವಿಷ್ಣುವರ್ಧನ್ ಅವರ ಮೇಲಿನ ಪ್ರೀತಿಯಿಂದ ‘ಯಜಮಾನ’ ಚಿತ್ರಕ್ಕೆ ಈಗಿನ ತಂತ್ರಜ್ಞಾನವನ್ನು ಅಳವಡಿಸಿ ಮರು ಬಿಡುಗಡೆ ಮಾಡುತ್ತಿದ್ದೇನೆ. 150 ಕ್ಕೂ ಹೆಚ್ಚು ಕಡೆ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರಮಂದಿರಗಳಲ್ಲೇ ಈ ಚಿತ್ರವನ್ನು ವೀಕ್ಷಿಸಿ ಎಂದು ಮುನಿಸ್ವಾಮಿ ಮನವಿ ಮಾಡಿಕೊಂಡರು.