ಚೆನ್ನೈ: ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಗಳು ಪರಸ್ಪರ ಕೈಕೈ ಮಿಲಾಯಿಸಿದ್ದು, ಈ ಪೈಕಿ ಓರ್ವ ಸ್ಪರ್ದಿ ಮೇಲೆ ಹಲ್ಲೆ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಬಿಗ್ಬಾಸ್ ಮನೆಯಲ್ಲಿ ಜಗಳಗಳು ನಡೆಯುವುದು ಸಾಮಾನ್ಯ. ಆದರೆ ನಿಯಮದ ಪ್ರಕಾರ ಯಾವ ಸ್ಪರ್ಧಿಯೂ ಸಹ ಮತ್ತೊಬ್ಬ ಸ್ಪರ್ಧಿಯ ಮೇಲೆ ಕೈ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಮನೆಯಿಂದ ಎಲಿಮಿನೇಟ್ ಮಾಡಲಾಗುತ್ತದೆ.
ಈ ಹಿಂದೆ ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿ ಪ್ರಥಮ್ ಮೇಲೆ ಹುಚ್ಚಾ ವೆಂಕಟ್ ಹಲ್ಲೆ ಮಾಡಿದ್ದರು. ಕೂಡಲೇ ಹುಚ್ಚಾವೆಂಕಟ್ ರನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಇದಾದ ಬಳಿಕ ಹಿಂದಿ ಬಿಗ್ ಬಾಸ್ ಓಟಿಟಿಯಲ್ಲಿ ಜೀಶನ್ ಖಾನ್ ಸೆಹಜ್ ಪಾಲ್ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಹಿಂದಿ ಬಿಗ್ ಬಾಸ್ ಸೀಸನ್ 13ರಲ್ಲಿ ಸಿದ್ಧಾರ್ಥ್ ಶುಕ್ಲಾ ಆಸಿಮ್ ರಿಯಾಜ್ ರನ್ನು ತಳ್ಳಿದ್ದು ದೊಡ್ಡ ಸುದ್ದಿಯಾಗಿತ್ತು.
ಇತ್ತೀಚೆಗೆ ಕನ್ನಡ ಬಿಗ್ ಬಾಸ್ ನಲ್ಲೂ ರಿಷಾ ಅವರು ಗಿಲ್ಲಿಯನ್ನು ಥಳಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಈ ಪಟ್ಟಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.
ತಮಿಳು ಬಿಗ್ ಬಾಗ್ ನಲ್ಲಿ ಪರಸ್ಪರ ಕೈಕೈ ಮಿಲಾಯಿಸಿದ ಸ್ಪರ್ಧಿಗಳು
ತಮಿಳು ಬಿಗ್ಬಾಸ್ ಸೀಸನ್ 09 ರಲ್ಲಿ ಸ್ಪರ್ಧಿಗಳು ಪರಸ್ಪರ ಕೈಕೈ ಮಿಲಾಯಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಈ ಶೋ ಪ್ರಾರಂಭವಾಗಿ ಐದು ವಾರಗಳಾಗಿದ್ದು, ಇಬ್ಬರು ಸ್ಪರ್ಧಿಗಳ ಮಧ್ಯೆ ಜಗಳ ಶುರುವಾಗಿ ಈ ಜಗಳದಲ್ಲಿ ಇನ್ನೂ ಕೆಲವು ಮಂದಿ ಪಾಲ್ಗೊಳ್ಳುವ ಮೂಲಕ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿದೆ. ಈ ವೇಳೆ ಇಬ್ಬರು ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದು, ಒಬ್ಬರ ತಲೆಗೆ ಪೆಟ್ಟು ಬಿದ್ದಿದೆ.
ವಿಡಿಯೋ ವೈರಲ್
ಸ್ಪರ್ಧಿಗಳಾದ ಕಮುರುದ್ಧೀನ್ ಮತ್ತು ಪ್ರವೀಣ್ ರಾಜ್ ವಿರುದ್ಧ ಜಗಳ ಉಂಟಾಗಿದೆ. ಬಿಡುಗಡೆ ಆಗಿರುವ ಪ್ರೋಮೋನಲ್ಲಿ ತೋರಿಸಿರುವಂತೆ, ಪ್ರವೀಣ್ ಯಾವುದೋ ವಿಚಾರಕ್ಕೆ ಕಮರುದ್ಧೀನ್ ಗೆ ಟಾಂಗ್ ಕೊಡುತ್ತಿದ್ದರು ಆದರೆ ಇದರಿಂದ ಸಿಟ್ಟಾದ ಕಮುರುದ್ಧೀನ್ ಏಕಾ-ಏಕಿ ಪ್ರವೀಣ್ ಮೇಲೆ ಏರಿ ಬಂದಿದ್ದಾರೆ. ಮೊದಲ ಬಾರಿಗೆ ಇತರೆ ಸ್ಪರ್ಧಿಗಳೆಲ್ಲ ಸೇರಿ ಕಮರುದ್ಧೀನ್ ಅನ್ನು ತಡೆದಿದ್ದಾರಾದರೂ ಬಳಿಕ ಪ್ರವೀಣ್ ಸಹ ಮುಂದೆ ಬಂದು ಕಮರುದ್ಧೀನ್ಗೆ ಒದೆಯಲು ಯತ್ನಿಸಿದ್ದಾರೆ.
ಆಗ ಕಮರುದ್ಧೀನ್ ಕೈ ಬೀಸಿ ಪ್ರವೀಣ್ ಮುಖಕ್ಕೆ ಹೊಡೆದಿದ್ದಾರೆ. ಏಟಿನ ರಭಸಕ್ಕೆ ಪ್ರವೀಣ್ ನೆಲಕ್ಕೆ ಬಿದ್ದಿದ್ದಾರೆ. ಈ ಜಗಳದಲ್ಲಿ ಇತರೆ ಕೆಲ ಸ್ಪರ್ಧಿಗಳು ಸಹ ಪರಸ್ಪರ ಎಳೆದಾಡಿರುವುದು ಪ್ರೋಮೊನಲ್ಲಿ ಕಾಣಿಸಿದೆ ಮಾತ್ರವಲ್ಲದೆ ಕಮುರುದ್ಧೀನ್ ಅವರ ಧರಿಸಿದ್ದ ಅಂಗಿಯನ್ನು ಸಹ ಹರಿಯಲಾಗಿದೆ.
ಪ್ರಾಂಕ್ ಪ್ರಯತ್ನ ಎಂದ ಸ್ಪರ್ಧಿಗಳು
ಇನ್ನು ವೈರಲ್ ಆಗಿರುವ ಮತ್ತೊಂದು ವಿಡಿಯೋದಲ್ಲಿ ಈ ಜಗಳ ಪ್ರೀ ಪ್ಲಾನ್ಡ್ ಆಗಿದ್ದು ಈ ಮಾತನ್ನು ಸ್ವತಃ ಸ್ಪರ್ಧಿಗಳೇ ಒಪ್ಪಿಕೊಂಡಿದ್ದಾರೆ. ಪ್ರವೀಣ್ ಮತ್ತು ಕಮರುದ್ಧೀನ್ ಕನ್ಫೆಷನ್ ರೂಮಿಗೆ ತೆರಳಿ ಅಲ್ಲಿ ಬಿಗ್ ಬಾಸ್ ಬಳಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ಇದು ಕೇವಲ ಪ್ರಾಂಕ್ ಮಾಡಲು ಮಾಡಿದ ಜಗಳವಾಗಿತ್ತು. ತಪ್ಪಾಗಿದ್ದರೆ ಕ್ಷಮಿಸಿ ಎಂದು ಕೇಳಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಅಂದಹಾಗೆ ತಮಿಳು ಬಿಗ್ಬಾಸ್ ಮನೆಯಲ್ಲಿ ಪ್ರಸ್ತುತ 20 ಮಂದಿ ಸ್ಪರ್ಧಿಗಳಿದ್ದಾರೆ. ಇತ್ತೀಚೆಗಷ್ಟೆ ನಾಲ್ಕು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಸಹ ಈ ಬಾರಿ ಜೋರಾಗಿ ಆಗಿದೆ. ಬರೋಬ್ಬರಿ 12 ಮಂದಿ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರಲ್ಲಿ ಪ್ರವೀಣ್ ಮತ್ತು ಕಮರುದ್ಧೀನ್ ಸಹ ಇದ್ದಾರೆ.