ಇತ್ತೀಚೆಗೆ ಚಿತ್ರರಂಗದಲ್ಲಿ 9 ರಿಂದ 4 ಗಂಟೆ ಕೆಲಸದ ಅವಧಿ ನಿಯಮ ಜಾರಿಗೆ ಬರಬೇಕು ಎಂಬ ಹೇಳಿಕೆಯಿಂದ ಸುದ್ದಿಯಾಗಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಈ ಬಾರಿ ಪೀರಿಯಡ್ಸ್ ನೋವು ಬಗ್ಗೆ ಹೇಳುವ ಮೂಲಕ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಹಿಳೆಯರು ಪ್ರತಿ ತಿಂಗಳು ಅನುಭವಿಸುವ ಮುಟ್ಟಿನ ನೋವನ್ನು ಅರ್ಥಮಾಡಿಕೊಳ್ಳಲು ಗಂಡಸರು ಒಮ್ಮೆಯಾದರೂ ಪೀರಿಯಡ್ಸ್ ನೋವನ್ನು ಅನುಭವಿಸಬೇಕು ಎಂದು ರಶ್ಮಿಕಾ ಮಂದಣ್ಣ ಅಭಿಪ್ರಾಯಪಟ್ಟಿದ್ದಾರೆ.
ಜಗಪತಿ ಬಾಬು ಅವರ ಚಾಟ್ ಶೋ "ಜಯಮ್ಮು ನಿಶ್ಚಿತಮ್ಮು ರಾ" ನ ಇತ್ತೀಚಿನ ಸಂಚಿಕೆಗೆ ಅತಿಥಿಯಾಗಿ ಆಗಮಿಸಿದ್ದ ರಶ್ಮಿಕಾ ಈ ರೀತಿಯ ಮಾತುಗಳನ್ನಾಡಿದ್ದಾರೆ.
ಮುಂಬರುವ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ಜಗಪತಿ ಬಾಬು, ಗಂಡಸರಿಗೂ ಮುಟ್ಟು ಬರಬೇಕೆಂದು ನೀವು ಬಯಸುತ್ತೀರಾ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ರಶ್ಮಿಕಾ "ಹೌದು ಸರ್. ಗಂಡಸರು ಒಮ್ಮೆಯಾದರೂ ಪೀರಿಯಡ್ಸ್ ಅನುಭವಿಸಬೇಕು. ಇದರಿಂದ ಅವರಿಗೆ ಆ ನೋವು ತಿಳಿಯುತ್ತದೆ" ಎಂದು ಹೇಳುತ್ತಾರೆ.
ರಶ್ಮಿಕಾ ಮಂದಣ್ಣ ಹೇಳಿಕೆಯು ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವು ನೆಟ್ಟಿಗರು ಅವರ ದೃಷ್ಟಿಕೋನವನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಟೀಕಿಸುತ್ತಿದ್ದಾರೆ. ಇದು ಆನ್‌ಲೈನ್‌ನಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
"ದಿ ಗರ್ಲ್‌ಫ್ರೆಂಡ್" ಚಿತ್ರ ಬಿಡುಗಡೆಗೂ ಮುನ್ನಾ ರಶ್ಮಿಕಾ ಈಗ ಈ ವಿಷಯಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ರಶ್ಮಿಕಾ ಹೇಳಿಕೆಯ ಸಂಪೂರ್ಣ ಎಪಿಸೋಡ್ ನಾಳೆ Z5 ನಲ್ಲಿ ಮೂಡಿಬರಲಿದೆ.