ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಡೇಟಿಂಗ್‌ನಲ್ಲಿದ್ದಾರೆ, ಇಬ್ಬರೂ ಎಂಗೇಜ್ ಆಗಿದ್ದಾರೆ. 2026ರ ಫೆಭ್ರವರಿಯಲ್ಲೇ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಉದಯಪುರದ ಅರಮನೆಯಲ್ಲಿ ಮದುವೆ ನಡೆಯಲಿದೆ ಎಂಬೆಲ್ಲ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಇದೇ ಮೊದಲ ಬಾರಿಗೆ ರಶ್ಮಿಕಾ ಅವರು ಮೌನ ಮುರಿದು ಮಾತನಾಡಿದ್ದಾರೆ.
Honest Townhall ವಾನಿಯ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಅವರು, ವಿಜಯ್ ದೇವರಕೊಂಡ ಅವರನ್ನ ಮದುವೆ ಆಗುವುದಾಗಿ ಹೇಳಿದ್ದಾರೆ.
ಫ್ಯಾನ್ಸ್‌ವೊಬ್ಬರು ಕೇಳಿದ ಪ್ರಶ್ನೆಗೆ ಮುಗುಳು ನಕ್ಕ ನಟಿ ನೇರವಾಗಿ ಉತ್ತರಿಸಿದ್ದಾರೆ. ಆ ರೂಮರ್ಸ್ ಎಲ್ಲರಿಗೂ ಗೊತ್ತಿದೆ, ಅದು ಸತ್ಯ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮದುವೆ ಆಗೋದಾದ್ರೆ ಯಾರನ್ನ ಆಗ್ತೀರಾ ಎಂಬ ಫ್ಯಾನ್ ಪ್ರಶ್ನೆಗೆ ಹಿಂದೆ ಮುಂದೆ ಯೋಚನೆ ಮಾಡದೇ ವಿಜಯ್‌ನ ಮದುವೆ ಆಗುತ್ತೀನಿ ಎಂದಿದ್ದಾರೆ.
ಇದಕ್ಕೂ ಮುನ್ನ ಸಂದರ್ಶನದಲ್ಲಿ ಮಾತನಾಡಿದ ನಟಿ, ಬಾಳ ಸಂಗಾತಿ ಹೇಗಿರಬೇಕು ಎಂಬುದರ ಕುರಿತು ಹೇಳಿದ್ದಾರೆ. ನನಗಾಗಿ ಯುದ್ಧವನ್ನೇ ಮಾಡಬಲ್ಲ, ಇಡೀ ಜಗತ್ತೇ ನನ್ನ ವಿರುದ್ಧ ತಿರುಗಿಬಿದ್ದಾಗ ನನ್ನೊಂದಿಗೆ ನಿಲ್ಲಬಲ್ಲ ಜೀವನ ಸಂಗಾತಿ ಬೇಕು. ಪ್ರಾಮಾಣಿಕವಾಗಿ ಹೇಳಬೇಕಂದ್ರೆ ಅತ್ಯಂತ ಆಳವಾಗಿ ನನ್ನನ್ನ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರಬೇಕು, ಅಂತಹ ಮುಕ್ತ ಮನಸ್ಸಿನ ಸಂಗಾತಿಯನ್ನ ಬಯಸುತ್ತೇನೆ. ನಾನೂ ಕೂಡ ಅವನಿಗಾಗಿ ಹೋರಾಡುತ್ತೇನೆ. ಯಾವುದೇ ದಿನ ಯಾವುದೇ ಕ್ಷಣ ಅವನಿಗಾಗಿ ಗುಂಡು ಹೊಡೆಸಿಕೊಳ್ಳಲು ಸಿದ್ಧಳಿದ್ದೇನೆಂದು ಹೇಳಿದರು.